

ವಿಜಯವಾಣಿ ಸುದ್ದಿಜಾಲ ಗುರುಪುರ
ಸನಾತನ ಧರ್ಮದ ಮೌಲ್ಯಗಳು ಸಮಾಜ ಗಟ್ಟಿಗೊಳಿಸುವ ಮೂಲಕ ರಾಷ್ಟ್ರವನ್ನು ಬಲಿಷ್ಠಗೊಳಿಸುತ್ತವೆ. ಹಿಂದು ತನ್ನ ಸದ್ವಿಚಾರದ ಶಿಕ್ಷಣ, ಬಾಂಧವ್ಯದ ನೆಲೆಗಟ್ಟು ಶ್ರೀಮಂತಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಸಂಸ್ಕಾರ- ಸಂಸ್ಕೃತಿ ಉದ್ದೀಪನಕ್ಕೆ ಬಾಲಗೋಕುಲ ಅತ್ಯಮೂಲ್ಯ ಕಾಣಿಕೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.
ಮುಚ್ಚೂರು ಶ್ರೀರಾಮ ಯುವಕ ಸಂಘದ ಸಂಯೋಜಿತ ಶ್ರೀರಾಮ ಬಾಲಗೋಕುಲದ ಶಿಕ್ಷಾರ್ಥಿಗಳಿಗೆ ಸೋಮವಾರ ಪುಸ್ತಕ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಸಂಘದ ಸಂಚಾಲಕ ಜನಾರ್ದನ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಚ್ಚೂರು ಪಂಚಾಯಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಪ್ರಕಾಶ್ ಹೆಗ್ಡೆ, ಪ್ರಸಾದ್ ಎಡಪದವು, ಸಂದೇಶ್ ಡೇಸಾ, ಧನಂಜಯ ಗುರಿಕಾರ, ಲಕ್ಷ್ಮೀಶ ಮುತ್ತೂರು, ಬಾಲಗೋಕುಲದ ಮಾತಾಜಿಗಳಾದ ಸರಿತಾ, ಕುಸುಮಾವತಿ, ದಿವ್ಯಾ, ಧನ್ಯಶ್ರೀ, ಪೂಜಾ ಮತ್ತಿತರರು ಉಪಸ್ಥಿತರಿದ್ದರು. ಎನ್ಎಂಎಂಎಸ್ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಉತ್ತೀರ್ಣರಾದ ಬಾಲಗೋಕುಲ ಶಿಕ್ಷಾರ್ಥಿ ನೇಹಾ ಅವರನ್ನು ಸನ್ಮಾನಿಸಲಾಯಿತು.
ಗ್ರಾಮಾಂತರ ಪ್ರದೇಶದಲ್ಲಿ ಬಾಲಗೋಕುಲದ ಹಿಂದು ಧರ್ಮದ ಬೌದ್ಧಿಕ ಶಿಕ್ಷಣ ಕೇಂದ್ರ ಬೆಳೆಯಬೇಕು. ಮಕ್ಕಳ ಶಿಕ್ಷಣದ ಅವಶ್ಯಕತೆಗಾಗಿ ಇಡೀ ಸಮಾಜ ಸ್ಪಂದಿಸಬೇಕು. ಶಿಕ್ಷಾರ್ಥಿಗಳ ಪ್ರತಿಭೆ ಅನಾವರಣಗೊಳ್ಳುವ ಜತೆಯಲ್ಲಿ ಸಮಾಜದ ಅಮೂಲ್ಯ ವ್ಯಕ್ತಿಗಳಾಗಿ ಹೊರಬರಲು ಬಾಲವಿಕಾಸ ಕೇಂದ್ರಗಳು ಕಾರಣವಾಗುತ್ತವೆ. ಪಾಲಕರು ಮಕ್ಕಳ ಅಂಕದ ಕಡೆಗೆ ಗಮನ ಕೊಡುವುದರ ಜತೆಗೆ ಸನಾತನ ಧರ್ಮದ ಅರಿವು ಮೂಡಿಸುವ ಕೆಲಸ ಮಾಡಬೇಕು.
ಡಾ.ವೈ.ಭರತ್ ಶೆಟ್ಟಿ, ಶಾಸಕ