

ಉಳ್ಳಾಲ: ಹರೇಕಳ ಎನ್ನುವ ಕುಗ್ರಾಮದಲ್ಲಿ ಪದವಿಪೂರ್ವ ಕಾಲೇಜು ಆರಂಭದ ಹಿಂದೆ ಹಾಜಬ್ಬ ಹಾಗೂ ಇತರರ ಪ್ರಯತ್ನ, ಶಾಸಕರ ಸಹಕಾರದಿಂದ ರಾಜ್ಯದಲ್ಲಿ ಮಂಜೂರಾದ ಏಕೈಕ ಪಪೂ ಕಾಲೇಜು ಎನಿಸಿದ್ದು ಶೀಘ್ರ ಕಟ್ಟಡ ನಿರ್ಮಾಣ ಆಗಲಿದೆ, ಮಕ್ಕಳು ಉತ್ತಮ ಶಿಕ್ಷಣ ಪಡೆದು ಮುನ್ನಡೆಯಬೇಕು ಎಂದು ಮಂಗಳೂರು ತಾಪಂ ಮಾಜಿ ಸದಸ್ಯ ಮುಸ್ತಫಾ ಮಲಾರ್ ಹೇಳಿದರು.
ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವತಿಯಿಂದ ಬುಧವಾರ ಹರೇಕಳದ ನ್ಯೂಪಡ್ಪು ಪ್ರೌಢಶಾಲಾ ಸಭಾಂಗಣದಲ್ಲಿ ನ್ಯೂಪಡ್ಪು ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆ, ಕಾಲೇಜುಗಳಿಗೆ ಆರ್ಥಿಕವಾಗಿ ಹಿಂದುಳಿದವರು ಬರುವುದರಿಂದ ಕಲಿಕೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದಿಂದ ಪುಸ್ತಕ ನೀಡಲಾಗುತ್ತಿದೆ ಎಂದರು.
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡಿ, 28 ಮಕ್ಕಳಿಂದ ಆರಂಭಗೊಂಡ ಶಾಲೆ ಇಂದು ಪದವಿಪೂರ್ವ ಕಾಲೇಜು ಆಗಿ ಅಭಿವೃದ್ಧಿ ಕಂಡಿದೆ. ಆರಂಭದ ದಿನಗಳಲ್ಲಿ ಶಾಲೆಗೆ ಸರ್ಕಾರದ ಸವಲತ್ತು ಇಲ್ಲದ ಸಂದರ್ಭ ತಾಪಂ ಸದಸ್ಯರಾಗಿದ್ದ ಮುಸ್ತಫಾ ಮಲಾರ್ ಕಲಿಕಾ ಸಾಮಗ್ರಿ ನೀಡಿದ್ದು ಈಗಲೂ ಮುಂದುವರಿಸಿದ್ದಾರೆ, ಕಾಲೇಜು ಕಟ್ಟಡ, ಇತರ ಅಭಿವೃದ್ಧಿಗೆ ಮೂರು ಕೋಟಿ ಅನುದಾನದ ಅಗತ್ಯವಿದೆ ಎಂದರು.
ಹರೇಕಳ ಗ್ರಾಪಂ ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ಪ್ರೌಢಶಾಲೆ ಮುಖ್ಯಶಿಕ್ಷಕ ಲಕ್ಷ್ಮಣ ಉಪಸ್ಥಿತರಿದ್ದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಅಬ್ದುಲ್ ರಜಾಕ್ ಕಾರ್ಯಕ್ರಮ ನಿರೂಪಿಸಿದರು.