ಬೊಂಬೆನಾಡು ಕಸದ ಬೀಡು ಹೆದ್ದಾರಿಗೆ ಬಂತು ಕಸ

IMG-20230930-WA0004
Published on

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಇಡೀ ದೇಶಾದ್ಯಂತ ಸ್ವಚ್ಛ ಭಾರತ ಅಭಿಯಾನದ ಒಂದು ಭಾಗವಾದ ಸ್ವಚ್ಛತಾ ಹಿ ಸೇವಾ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದರೆ, ಬೊಂಬೆನಾಡು ಚನ್ನಪಟ್ಟಣದ ರಾಜಬೀದಿಗಳಲ್ಲಿ ಮಾತ್ರ ರಾಶಿ ರಾಶಿ ತ್ಯಾಜ್ಯ ಕಣ್ಣಿಗೆ ರಾಚುವ ಮೂಲಕ ಕಳಂಕ ತಂದೊಡ್ಡಿದೆ.

ಚೆಂದದ ಪಟ್ಟಣ, ಬೊಂಬೆಗಳ ನಾಡು ಎಂದು ಹೆಸರು ಗಳಿಸಿರುವ ಚನ್ನಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ತಾರಕ್ಕೇರಿದೆ. ಹಲವಾರು ವರ್ಷಗಳಿಂದ ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗವಿಲ್ಲದ ಕಾರಣ ಚೆಂದದ ಪಟ್ಟಣ ಕಸದಪಟ್ಟಣವಾಗಿ ಬದಲಾಗಿದೆ.

ಇಷ್ಟು ದಿನ ನಗರದ ಒಳಗೆ ತ್ಯಾಜ್ಯದ ರಾಶಿಗಳು ಸಾಮಾನ್ಯ ಎನಿಸಿದ್ದವು. ಆದರೆ, ಇದೀಗ, ನಗರದಲ್ಲಿ ಹಾದು ಹೋಗಿರುವ ಬೆಂಗಳೂರು & ಮೈಸೂರು ಹೆದ್ದಾರಿಯಲ್ಲೆ ರಾಶಿ ರಾಶಿ ಕಸ ಬಿದ್ದಿರುವುದು ನಗರದ ಮಾನಕ್ಕೆ ಸಂಚಕಾರ ತಂದಿದೆ. ಬೃಹತ್​ ಕಸದ ರಾಶಿ ನಗರಕ್ಕೆ ಬರುವ ಜನತೆಗೆ ಸ್ವಾಗತ ಕೋರುತ್ತಿದೆ.

ಪ್ರಾಣಕ್ಕೂ ಸಂಚಕಾರ!

ಬೆಂಗಳೂರು ಮೈಸೂರು ಹೆದ್ದಾರಿಯ ಕುಡಿನೀರು ಕಟ್ಟೆ ಬಳಿ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ. ಅದು ಕೂಡ ರಸ್ತೆಗೆ ಎಂಬುದು ವಿಪರ್ಯಾಸ. ಈ ಜಾಗದಲ್ಲಿ ಈ ಪ್ರಮಾಣದ ತ್ಯಾಜ್ಯ ಸುರಿದಿದ್ದರೂ ನಗರಸಭೆಯವರು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಮೇಲಾಗಿ ನಗರಸಭೆಯಿಂದಲೇ ಈ ಜಾಗದಲ್ಲಿ ಕಸ ಸುರಿಯುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ.

ಇಲ್ಲಿ ಬಿದ್ದಿರುವ ತ್ಯಾಜ್ಯ ವಾಹನ ಸವಾರರ ಪ್ರಾಣಕ್ಕೂ ಸಂಚಕಾರ ತರುತ್ತಿದೆ. ತ್ಯಾಜ್ಯ ತಿನ್ನಲು ಬೀಡಾಡಿ ಪ್ರಾಣಿಗಳು (ನಾಯಿ, ದನಕರು) ಮುಗಿಬೀಳುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿವೆ. ಕಸದ ಮೂಟೆಗಳನ್ನು ನಾಯಿಗಳು ರಸ್ತೆ ಮಧ್ಯೆಗೆ ಎಳೆದು ಹಾಕುತ್ತಿವೆ, ಇದು ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೂ ಸಂಚಕಾರ ತರುತ್ತಿದೆ.

ಶಾಶ್ವತ ಪರಿಹಾರ ಇಲ್ಲವೇ?

ದೇಶದಾದ್ಯಂತ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ, ದಶಕಗಳಿಂದ ಚನ್ನಪಟ್ಟಣವನ್ನು ತ್ಯಾಜ್ಯ ಸಮಸ್ಯೆ ಕಾಡುತ್ತಿದೆ. ಈ ಹಿಂದೆ ಕಣ್ವ ಜಲಾಶಯದ ಬಳಿ ಚನ್ನಪಟ್ಟಣ&ರಾಮನಗರ ನಗರಸಭೆಗಳ ತ್ಯಾಜ್ಯ ವಿಲೇವಾರಿ ಟಕಕ್ಕೆ 50 ಎಕರೆ ಜಾಗವನ್ನು ನಿಗದಿಪಡಿಸಲಾಗಿತ್ತು. ಆದರೆ, ಸ್ಥಳಿಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಲಾಯಿತು.

ಅಂದಿನಿಂದ ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡಲು ಜಾಗವೇ ಇಲ್ಲದಂತಾಗಿದೆ. ಕಳೆದ 9 ವರ್ಷಗಳಿಂದ ಜಿಲ್ಲಾಡಳಿತ ಡಂಪಿಂಗ್​ ಯಾರ್ಡ್​ಗೆ ಸೂಕ್ತ ಜಾಗ ಗುರುತಿಸಲು ಸಾಧ್ಯವಾಗಿಲ್ಲ. ನಗರದ ತ್ಯಾಜ್ಯ ವಿಲೇವಾರಿ ಮಾಡಲು ಸೂಕ್ತ ಜಾಗ ಗುರುತಿಸುವಲ್ಲಿ ಜಿಲ್ಲಾಡಳಿತ, ನಗರಸಭೆ ವಿಫಲವಾಗಿರುವುದು ಹೆದ್ದಾರಿವರೆಗೂ ತ್ಯಾಜ್ಯ ಸಮಸ್ಯೆ ವ್ಯಾಪಿಸಲು ಕಾರಣ ಎನ್ನಬಹುದಾಗಿದೆ.

ನಗರಸಭೆ ವಿಫಲ!

ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗವಿಲ್ಲದಿದ್ದರೂ ಇಷ್ಟು ದಿನ ನಗರದ ತ್ಯಾಜ್ಯವನ್ನು ಖಾಸಗಿ ಜಾಗ ಸೇರಿ ಅಲ್ಲಲ್ಲಿ ವಿಲೇವಾರಿ ಮಾಡಿ ಕೈತೊಳೆದುಕೊಳ್ಳಲಾಗುತಿತ್ತು. ಆದರೆ, ಇತ್ತೀಚೆಗೆ ಕಸ ವಿಲೇವಾರಿಯಲ್ಲಿ ನಗರಸಭೆ ಸಂಪೂರ್ಣವಾಗಿ ವಿಫಲವಾಗಿದೆ.

ನಗರಸಭೆ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಹಾಗೂ ಪರಸ್ಪರ ಅಸಹಕಾರದಿಂದ ತ್ಯಾಜ್ಯ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. ನಗರಸಭೆ ಪೌರಾಯುಕ್ತ ಪುಟ್ಟಸ್ವಾಮಿ ಹಾಗೂ ನಗರಸಭೆ ಅಧ್ಯ ಪ್ರಶಾಂತ್​ ನಡುವೆ ನಡೆಯುತ್ತಿರುವ ಶೀತಲ ಸಮರವೂ ಕಸ ವಿಲೇವಾರಿ ಮೇಲೆ ಪರಿಣಾಮ ಬೀರಿದೆ ಎನ್ನುವ ಮಾತುಗಳು ನಗರಸಭೆ ಆವರಣದಿಂದಲೇ ಕೇಳಿಬರುತ್ತಿದೆ.

ತ್ರಿಮೂರ್ತಿಗಳು ಗಮನಹರಿಸಬೇಕಾಗಿದೆ!

ನಗರದ 31 ವಾರ್ಡ್​ಗಳಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದು, ಪ್ರತಿದಿನ 40 ಟನ್​ ಕಸ ಉತ್ಪತ್ತಿಯಾಗುತ್ತಿದೆ. ಸದ್ಯ ನಗರಸಭೆ ಮೂರು ಕಡೆಯಲ್ಲಿ ಹಸಿ ಹಾಗೂ ಒಣ ಕಸ ವಿಂಗಡಿಸಿ ತ್ಯಾಜ್ಯ ವಿಲೇವಾರಿ ಮಾಡಲು ಹರಸಾಹಸ ಪಡುತ್ತಿದೆ. ಆದರೆ, ಪ್ರತಿನಿತ್ಯ ಉತ್ಪತ್ತಿಯಾಗುತ್ತಿರುವ ಈ ಪ್ರಮಾಣದ ತ್ಯಾಜ್ಯ ವಿಲೇವಾರಿ ಅಸಾಧ್ಯವಾಗುತ್ತಿದೆ.

ಈಗಾಗಲೇ ತ್ಯಾಜ್ಯ ವಿಲೇವಾರಿಗೆ ಹಲವಾರು ಜಾಗಗಳನ್ನು ಗುರುತು ಮಾಡಲಾಗಿದೆಯಾದರೂ, ಯಾವ ಜಾಗವೂ ಮಂಜೂರಾಗಿಲ್ಲ. ಈಗಲಾದರೂ ಕ್ಷೇತ್ರಕ್ಕೆ ಸಂಬಂಧಿಸಿದ ತ್ರಿಮೂರ್ತಿಗಳಾದ ಸಂಸದ ಡಿ.ಕೆ. ಸುರೇಶ್​, ಶಾಸಕ ಎಚ್​.ಡಿ.ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್​ ಸದಸ್ಯ ಸಿ.ಪಿ. ಯೋಗೇಶ್ವರ್​ ಈ ಸಮಸ್ಯೆ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ಇಲ್ಲವಾದರೆ, ಹೆದ್ದಾರಿಯ ಮುಂಭಾಗ ಬಿದ್ದಿರುವ ಕಸದ ರಾಶಿ, ಮುಂದಿನ ದಿನಗಳಲ್ಲಿ ಹೆದ್ದಾರಿಯುದ್ದಕ್ಕೂ ಬಿದ್ದು ನಗರದ ಮಾನ ಕಳೆಯುವುದರಲ್ಲಿ ಸಂಶಯವೇ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net