

ನಾಪೋಕ್ಲು: ಮೂರು-ನಾಲ್ಕು ದಿನಗಳಿಂದ ಹೋಬಳಿ ವ್ಯಾಪ್ತಿಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿ-ಮಳೆಯಿಂದಾಗಿ ಅಲ್ಲಲ್ಲಿ ಮರದ ರೆಂಬೆಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಗ್ರಾಮೀಣ ಪ್ರದೇಶದಲ್ಲಿ ಕಡಿತಗೊಂಡಿದೆ. ಬಹುತೇಕ ಗ್ರಾಮಗಳು ಕತ್ತಲಲ್ಲಿ ಮುಳುಗಿವೆ.
ಬುಧವಾರ ಸುರಿದ ಧಾರಾಕಾರ ಮಳೆ ಗಾಳಿಯಿಂದ ಕಕ್ಕಬೆ ಕುಂಜಿಲ ಪಂಚಾಯಿತಿ ವ್ಯಾಪ್ತಿಯ ಕೊಡಿಮಣಿಯಂಡ ಪೂವಣ್ಣ ಅವರ ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಜನಾರ್ಧನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಲೋಕೇಶ್, ಸದಸ್ಯ ಕೊಡಿಮಣಿಯಂಡ ಬೋಪಣ್ಣ ಭೇಟಿನೀಡಿ ಪರಿಶೀಲನೆ ನಡೆಸಿದರು.
ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆಯ ಹೊದ್ದೂರು ಗ್ರಾಮದ ಬೊಳಿಬಾಣೆ ಎಂಬಲ್ಲಿ ಕಾವೇರಿ ಪ್ರವಾಹದಿಂದ ರಸ್ತೆ ಜಲಾವೃತವಾಗಿ ಸಂಚಾರ ಸ್ಥಗಿತಗೊಂಡಿದೆ.
ಸಮೀಪದ ಚೆರಿಯಪರಂಬುವಿನಲ್ಲೂ ರಸ್ತೆ ಜಲಾವೃತವಾಗಿ ನಾಪೋಕ್ಲು-ಕಲ್ಲುಮೊಟ್ಟೆ ಸಂಪರ್ಕ ರಸ್ತೆ ಕಡಿತಗೊಂಡಿದೆ. ನಾಪೋಕ್ಲು ಪಾರಾಣೆ ಮಾರ್ಗವಾಗಿ ವಿರಾಜಪೇಟೆಗೆ ಸಾಗುವ ಬೊಳ್ಳುಮಾಡು ಮುಖ್ಯರಸ್ತೆ ಕೂಡ ಪ್ರವಾಹದಿಂದ ಮುಳುಗಡೆಯಾಗಿದೆ.
ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಬಹುತೇಕ ಕಾಫಿ ತೋಟಗಳು ಪ್ರವಾಹದಲ್ಲಿ ಮುಳುಗಿವೆ. ಇಲ್ಲಿಗೆ ಸಮೀಪದ ಎಮ್ಮೆಮಾಡಿನಲ್ಲಿರುವ ಗದ್ದೆಗಳು ಕಾವೇರಿ ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿವೆ. ಅದೇ ರೀತಿ ಪಾರಾಣೆ ಗ್ರಾಮ ಪಂಚಾಯಿತಿಯ ಕೈಕಾಡು ಗ್ರಾಮದಲ್ಲಿ ಕೆಲವು ನಾಟಿ ಗದ್ದೆಗಳು ನೀರಿನಲ್ಲಿ ಮುಚ್ಚಿಹೋಗಿವೆ.
ನಾಪೋಕ್ಲು- ಮೂರ್ನಾಡು ಸಂಪರ್ಕ ರಸ್ತೆಯ ಕೊಟ್ಟಮುಡಿಯ ಕೂಡು ರಸ್ತೆಯ ಬಳಿ ತಗ್ಗು ಪ್ರದೇಶದ ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗಿದೆ. ನಾಪೋಕ್ಲು-ಬೆಟ್ಟಗೇರಿ ಮುಖ್ಯರಸ್ತೆಯಲ್ಲಿ ಕೊಟ್ಟಮುಡಿ ಕಾವೇರಿ ನದಿ ಬಳಿ ರಸ್ತೆಯ ಬದಿಯಲ್ಲಿ ಅಪಾಯದ ಗುಂಡಿ ಗೋಚರಿಸಿದ್ದು, ದುರಸ್ತಿಪಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.