

ಬಂಟ್ವಾಳ: ನಾಲ್ಕು ದಿನದ ಹಿಂದೆ ನಾಪತ್ತೆಯಾಗಿದ್ದ ಕಡೇಶಿವಾಲಯ ನಿವಾಸಿ ಹೇಮಂತ್ ಆಚಾರ್ಯ(21) ಎಂಬುವರ ಮೃತದೇಹ ನೇತ್ರಾವತಿ ನದಿಯಲ್ಲಿ ಗುರುವಾರ ಪತ್ತೆಯಾಗಿದೆ.
ಹೇಮಂತ್ ಸೋಮವಾರ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳವಾರ ಮಧ್ಯಾಹ್ನ ಜಕ್ರಿಬೆಟ್ಟು ಡ್ಯಾಂ ಬಳಿ ಅವರ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಅನಾಥವಾಗಿ ಪತ್ತೆಯಾಗಿತ್ತು. ಅದೇ ದಿನ ಮಧ್ಯಾಹ್ನದ ಬಳಿಕ ಸ್ಥಳೀಯ ಮುಳುಗು ತಜ್ಞರ ತಂಡ, ಅಗ್ನಿ ಶಾಮಕದಳ ಹಾಗೂ ಬಂಟ್ವಾಳ ಗ್ರಾಮಾಂತರ ಮತ್ತು ನಗರ ಠಾಣಾ ಪೊಲೀಸರ ತಂಡ ನೇತ್ರಾವತಿ ನದಿ ಹಾಗೂ ನದಿ ತಟದಲ್ಲಿ ತೀವ್ರ ಶೋಧ ನಡೆಸಿತ್ತು. ಆದರೆ ಸಂಜೆವರೆಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಬುಧವಾರ ಬೆಳಗ್ಗೆಯಿಂದಲೇ ತಂಡ ಜಕ್ರಿಬೆಟ್ಟು ಡ್ಯಾಂನಿಂದ ತುಂಬೆ ಡ್ಯಾಂವರೆಗೂ ಶೋಧ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಗುರುವಾರ ಕಡೇಶಿವಾಲಯ ಗ್ರಾಪಂ ಸದಸ್ಯ ಸಂಪತ್ ಸುವರ್ಣ ಮುತುವರ್ಜಿಯಿಂದ ಈಶ್ವರ್ ಮಲ್ಪೆ ಹಾಗೂ ಎನ್ಡಿಆರ್ಎಫ್ ತಂಡವನ್ನು ಕರೆಸಿ ಅಗ್ನಿಶಾಮಕದಳದ ಜತೆ ಸ್ಥಳೀಯ ಈಜುಗಾರ ನಿಸಾರ್ ಅವರೊಂದಿಗೆ ಜಕ್ರಿಬೆಟ್ಟುವಿನಿಂದ ತುಂಬೆವರೆಗೂ ಶೋಧ ನಡೆಸಿತ್ತು. ಅದರಲ್ಲಿ ಯಾವುದೇ ರೀತಿಯ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಳಿಕ ತುಂಬೆ ಡ್ಯಾಂನಿಂದ ಕೆಳಭಾಗದಲ್ಲಿ ಮೂರು ತಂಡಗಳ ಜೊತೆಯಲ್ಲಿ ಡ್ರೋನ್ ಬಳಸಿ ಶೋಧ ನಡೆಸಲಾಗಿತ್ತು. ಸಂಜೆ ಶವವೊಂದು ತೇಲುತ್ತಿರುವುದು ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು, ನದಿಯಲ್ಲಿ ಶೋಧ ಕಾರ್ಯದಲ್ಲಿ ತೊಡಗಿದ್ದ ತಂಡ ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದೆ.
ಹೇಮಂತ್ ತಂದೆ ತಾಯಿಗೆ ಏಕೈಕ ಪುತ್ರನಾಗಿದ್ದು, ಮನೆಗೆ ಆಧಾರಸ್ತಂಭವಾಗಿದ್ದರು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ತಾಯಿ ಕೈ ನೋವು, ತಂದೆ ಮನೋವ್ಯಾಧಿಯಿಂದ ಬಳಲುತ್ತಿದ್ದಾರೆ.