ಅನುಮಾನಾಸ್ಪದವಾಗಿ ಅಪ್ರಾಪ್ತೆ ಮೃತ ದೇಹ ಪತ್ತೆ

crime
Published on

*ಮಾತು ಬಾರದ, ಕಿವಿ ಕೇಳಿಸದ ಬಾಲಕಿ

* ಅತ್ಯಾಚಾರ ಎಸಗಿ ಕೊಲೆಗೈದು ಭದ್ರಾಪುರ ರೈಲು ಹಳಿ ಪಕ್ಕ ಎಸೆದಿರುವ ಶಂಕೆ

ಬಿಡದಿ

ಭದ್ರಾಪುರದಲ್ಲಿ ರೈಲು ಹಳಿ ಪಕ್ಕದಲ್ಲಿ ಅಪ್ರಾಪ್ತೆ ಮೃತ ದೇಹಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಾತು ಬಾರದ, ಕಿವಿ ಕೇಳಿಸದ ಗ್ರಾಮದ 14ರ ವಯೋಮಾನದ ಬಾಲಕಿ ಭಾನುವಾರ ಮಧ್ಯಾಹ್ನದಿಂದ ಮನೆಯಲ್ಲಿ ಕಾಣಿಸುತ್ತಿರಲಿಲ್ಲ. ಮನೆಯವರು ಎಲ್ಲೆಡೆ ವಿಚಾರಿಸಿದರೂ ಎಲ್ಲಿಯೂ ಸುಳಿವು ಸಿಕ್ಕಿರಲಿಲ್ಲ. ಗ್ರಾಮದ ಕೂಗಳತೆ ದೂರದಲ್ಲಿರುವ ರೈಲು ಹಳಿಯ ಪಕ್ಕದಲ್ಲಿ ಸೋಮವಾರ ಬೆಳಗ್ಗೆ ಶವ ಪತ್ತೆಯಾಗಿದೆ.

ಮಾಹಿತಿ ಪಡೆದ ಬಿಡದಿ ಪೊಲೀಸರು ಸ್ಥಳಕ್ಕೆ ಧಾವಿಸಿ ರೈಲು ಡಿಕ್ಕಿಯಿಂದ ಮೃತಪಟ್ಟಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಶವ ರೈಲ್ವೆ ಇಲಾಖೆ ಜಾಗದಲ್ಲಿದ್ದ ಕಾರಣ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ಬೆಂಗಳೂರಿನಿಂದ ಬಂದ ರೈಲ್ವೆ ಪೊಲೀಸರು ಪರಿಶೀಲಿಸಿದ್ದು, ಮೇಲ್ನೋಟಕ್ಕೆ ಕೊಲೆ ಎಂದು ಶಂಕಿಸಿದರು. ಬಾಲಕಿಯ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದ ಗುರುತು ಪತ್ತೆಯಾಗಿತ್ತು. ಹಾಗಾಗಿ ಈ ಪ್ರಕರಣವನ್ನ ಬಿಡದಿ ಪೊಲೀಸರಿಗೆ ವರ್ಗಾವಣೆ ಮಾಡಲಾಯಿತು.

ಬಿಡದಿ ಠಾಣೆ ಸಿಪಿಐ ಶಂಕರ್ ನಾಯಕ್ ನೇತೃತ್ವದಲ್ಲಿ ಬಾಲಕಿಯ ಮೃತದೇಹವನ್ನು ರೈಲ್ವೆ ಜಾಗದಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಿದರು. ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಪಿ ಶ್ರೀನಿವಾಸ್‌ಗೌಡ ಸ್ಥಳ ಪರಿಶೀಲಿಸಿದ್ದು, 3 ತಾಸಿಗೂ ಹೆಚ್ಚು ಕಾಲ ಹಲವು ಮಾಹಿತಿ ಕಲೆ ಹಾಕಿದರು.

ಅತ್ಯಾಚಾರದ ಶಂಕೆ ?

ಬಾಲಕಿಯ ಬಟ್ಟೆಗಳು ಹರಿದಿದ್ದವು. ಹಾಗಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅದಲ್ಲದೆ, ಬಾಲಕಿಯನ್ನು ಬೇರೆಡೆ ಅತ್ಯಾಚಾರ ನಡೆಸಿ ಕೊಲೆ ಮಾಡಿ ಇಲ್ಲಿಗೆ ತಂದು ಹಾಕಲಾಗಿದೆ. ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ಹಾಗೂ ಪ್ರಕರಣದ ದಿಕ್ಕು ತಪ್ಪಿಸುವ ಸಲುವಾಗಿ ರೈಲ್ವೆ ಹಳಿಯ ಪಕ್ಕಕ್ಕೆ ತಂದು ಎಸೆದು ಹೋಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net