

ಹನೂರು: ಬಿಹಾರದ ಬುದ್ಧಗಯಾ ಮಹಾಬೋಧಿ ಮಹಾ ವಿಹಾರವನ್ನು ಬೌದ್ಧರಿಗೆ ವಹಿಸುವಂತೆ ಒತ್ತಾಯಿಸಿ ಹನೂರಿನಲ್ಲಿ ಶನಿವಾರ ವಿವಿಧ ಅಂಬೇಡ್ಕರ್ ಸಂಘಗಳ ಒಕ್ಕೂಟದಿಂದ ಶನಿವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯ ಮುಂಭಾಗದಲ್ಲಿ ನೆರೆದಿದ್ದ ಚನ್ನಾಲಿಂಗನಹಳ್ಳಿ ಜೇತವನ ಬುದ್ಧ ವಿಹಾರ, ದಲಿತ ಸಂಘರ್ಷ ಸಮಿತಿ, ಬೌದ್ಧ ಮಹಾಸಭಾ ಹಾಗೂ ಮಹಿಳಾ ಒಕ್ಕೂಟದ ನೂರಾರು ಸಂಘಟನಕಾರರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ತೆರಳಿ ನ್ಯಾಯ ಒದಗಿಸುವಂತೆ ಘೋಷಣೆ ಕೂಗಿ ತಹಸೀಲ್ದಾರ್ ಕಚೇರಿಗೆ ಆಗಮಿಸಿದರು.
ಈ ವೇಳೆ ಜೇತವನ ಬುದ್ಧ ವಿಹಾರದ ಮನೋರಖ್ಖಿತ ಬಂತೇಜಿ ಮಾತನಾಡಿ, 1949 ಬುದ್ಧಿಸ್ಟ್ ಟೆಂಪಲ್ ಮ್ಯಾನೇಜ್‌ಮೆಂಟ್ ಕಮಿಟಿ ಕಾಯ್ದೆಯ ಪ್ರಕಾರ ಬಿಹಾರದ ಬುದ್ಧಗಯಾ ಮಹಾಬೋಧಿ ಮಹಾ ವಿಹಾರದಲ್ಲಿ ಜಿಲ್ಲಾಧಿಕಾರಿ, 4 ಹಿಂದು ಪುರೋಹಿತರು ಹಾಗೂ ನಾಲ್ವರು ಬೌದ್ಧ ಭಿಕ್ಕುಗಳು ಒಳಗೊಂಡಂತೆ ಸಮಿತಿ ರಚಿಸಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಇಲ್ಲಿ ಪುರೋಹಿತ ಶಾಹಿಗಳ ಪ್ರಾಬಲ್ಯ ದಿನೇ ದಿನೆ ಹೆಚ್ಚಾಗುತ್ತಿರುವ ಪರಿಣಾಮ ಬುದ್ಧನ ಪವಿತ್ರ ಸ್ಥಳ ನಾಶವಾಗುತ್ತಿದೆ. ಚರ್ಚ್‌ಗಳನ್ನು ಕ್ರಿಶ್ಚಿಯನ್ನರ ಸುಪರ್ದಿಗೆ, ಮಸೀದಿಗಳು ಮುಸ್ಲಿಮರಿಗೆ, ಹಿಂದು ದೇಗುಲಗಳು ಪುರೋಹಿತ ಸುಪರ್ದಿಗೆ ವಹಿಸಲಾಗಿದೆ. ಅದರಂತೆ ಬುದ್ಧಗಯಾ ಮಹಾ ವಿಹಾರವನ್ನು ಸಂಪೂರ್ಣ ಬೌದ್ಧರಿಗೆ ವಹಿಸಬೇಕು. ಈ ಸಂಬಂಧ ಕಳೆದ 2 ವರ್ಷದಿಂದಲೂ ಬೌದ್ಧ ಬಿಕ್ಕುಗಳು ಹಾಗೂ ಉಪಾಸಕರು ಹೋರಾಟ ನಡೆಸುತ್ತಿದ್ದಾರೆ. ಆದರೆ ಈವರೆಗೂ ಸಾಧ್ಯವಾಗಿಲ್ಲ. ಆದ್ದರಿಂದ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ವಿಹಾರವನ್ನು ಬೌದ್ಧರಿಗೆ ವಹಿಸಿಕೊಡುವುದರ ಮೂಲಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಮನವಿಯನ್ನು ಶಿರಸ್ತೇದಾರ್ ನಾಗೇಂದ್ರ ಅವರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಹನೂರಿನ ಅಶೋಕ ರಾಮ ಬುದ್ಧ ವಿಹಾರದ ಧಮ್ಮ ತಿಸ್ಸಾ ಬಂತೇಜಿ, ಗುಣ ರಖಿತಾ ಬಂತೇಜಿ, ದಸಂಸ ರಾಜ್ಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ಮೈಸೂರು ವಿಭಾಗೀಯ ಸಂಚಾಲಕ ಕೆ. ವೀರ, ಜಿಲ್ಲಾ ಸಂಚಾಲಕ ಮಾಂಬಳ್ಳಿ ಹಿಂಡಯ್ಯ, ತಾಲೂಕು ಸಂಚಾಲಕ ಮಹೇಶ್, ಮಾರ್ಟಳ್ಳಿ ಗ್ರಾಪಂ ಸದಸ್ಯ ರಾಮಲಿಂಗಂ, ಪಪಂ ಸದಸ್ಯ ಸಂಪತ್‌ಕುಮಾರ್, ಮುಖಂಡರಾದ ಸಿಂಗಾನಲ್ಲೂರು ಸಿದ್ದರಾಜು, ದಲಿತ್ ಕಿರಣ್, ಸಂತೋಷ್, ಮಹಾಲಿಂಗ, ಮರಿಯಮ್ಮ ಸೇರಿ ಇತರರು ಇದ್ದರು.