

ಗೋಣಿಕೊಪ್ಪಲು: ಕುಂದಾ ಬೆಟ್ಟದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಕೊಡಗಿನ ಮೊದಲ ಬೋಡ್ ನಮ್ಮೆ ಅಕ್ಟೋಬರ್ 17 ಹಾಗೂ 18ರಂದು ಪೊನ್ನಂಪೇಟೆ ತಾಲೂಕಿನ ಬೊಟ್ಟಿಯತ್ ನಾಡ್ ಕುಂದಾ ಹಾಗೂ ಮುಗುಟಿಗೇರಿ ಗ್ರಾಮದಲ್ಲಿ ನಡೆಯಲಿದೆ. ಕುಂದತ್ ಬೊಟ್ಟ್’ಲ್ ನೇಂದಾ ಕುದುರೆ... ಪಾರಣ ಮಾನಿಲ್ ಅಳ್‌ಂಜ ಕುದುರೆ.. ಎಂಬ ಬೋಡ್ ನಮ್ಮೆಯ ಜಾನಪದ ಹಾಡಿನಂತೆ ಬೊಟ್ಟಿಯತ್ ನಾಡಿನ ಕುಂದಾ ಗ್ರಾಮದಲ್ಲಿರುವ ಶ್ರೀ ಈಶ್ವರ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಅ.11ರಂದು ಕೊಡಗಿನ ಮೊದಲ ಬೋಡ್ ನಮ್ಮೆಗೆ ಕಟ್ಟ್ ಬೀಳುವ ಮೂಲಕ ಊರಿನಲ್ಲಿ ಹಬ್ಬದ ಕಟ್ಟುಪಾಡುಗಳಿಗೆ ಚಾಲನೆ ನೀಡಲಾಯಿತು.
ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬದ ತಕ್ಕಾಮೆಯಲ್ಲಿ ನಡೆಯುವ ಈ ಹಬ್ಬ ಇಲ್ಲಿನ ಅಂಬಲದಲ್ಲಿ ಹಬ್ಬದ ಕಟ್ಟುಪಾಡುಗಳನ್ನು ತಿಳಿಸಿ ಬೋಡ್ ನಮ್ಮೆಯ ಸಾಂಪ್ರದಾಯಿಕ ಹಾಡು ಹೇಳುತ್ತಾ ಡೋಲು ಬಾರಿಸುವ ಮೂಲಕ ಹಬ್ಬಕ್ಕೆ ಚಾಲನೆ ದೊರೆಯಿತು.
ಈ ಬಾರಿ ಅ.17ರಂದು ಸಾಂಪ್ರದಾಯಿಕ ಮನೆಕಳಿ ಹಾಗೂ ಅ.18ರಂದು ಸಾಂಪ್ರದಾಯಿಕ ಕುದುರೆ ಹಬ್ಬ ಹಾಗೂ ಬೆಟ್ಟ ಹತ್ತುವ ಕಾರ್ಯಕ್ರಮ ಇರುತ್ತದೆ. ಕಾವೇರಿ ತೀರ್ಥೋದ್ಭವದ ಬಳಿಕ ಕಾವೇರಿ ಪವಿತ್ರ ತೀರ್ಥವನ್ನು ತಂದು ಅ.18ರಂದು ಬೆಟ್ಟದ ಮೇಲಿರುವ ಬೊಟ್ಲಪ್ಪನಿಗೆ ಅರ್ಪಿಸುವ ಮೂಲಕ ವಿವಿಧ ಆಚರಣೆ ನಡೆಯುತ್ತದೆ.
ಅ.18ರಂದು ಮನೆಯಪಂಡ ಹಾಗೂ ಸಣ್ಣುವಂಡ ಕುಟುಂಬದ ಬಲ್ಯಮನೆಯಿಂದ ಕೃತಕವಾಗಿ ತಯಾರಿಸಲಾದ ತಲಾ ಒಂದೊಂದು ಕುದುರೆಯನ್ನು ಶೃಂಗರಿಸಿ ಮಧ್ಯಾಹ್ನ 1ಕ್ಕೆ ಇಲ್ಲಿನ ಈಶ್ವರ ದೇವಸ್ಥಾನದ ಸಮೀಪದ ಅಂಬದಲ್ಲಿ ಸೇರಿ ಹತ್ತಿರದ ಕುಂದಾ ಬೆಟ್ಟವನ್ನು ಹತ್ತಲು ಪ್ರಾರಂಭಿಸುತ್ತಾರೆ. ಕೇವಲ ಅರ್ಧ ಗಂಟೆಯಲ್ಲಿಯೇ ಕಡಿದಾದ ಬೆಟ್ಟವನ್ನು ಏರಿ ಅಲ್ಲಿ ಬೊಟ್ಲಪ್ಪ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.