ರಂಗರಾಯರದೊಡ್ಡಿ ಕೆರೆಯಲ್ಲಿ ದೋಣಿ ವಿಹಾರ

27-09-rama-boat
Published on

* ಶಾಸಕ ಇಕ್ಬಾಲ್​ ಹುಸೇನ್​ ಚಾಲನೆ

* ಬೋಟಿಂಗ್​, ವಾಟರ್​ ರೈಡಿಂಗ್​ಗೆ ಅವಕಾಶ

ರಾಮನಗರ

ವಿಶ್ವ ಪ್ರವಾಸೋದ್ಯಮ ದಿನದ ಪ್ರಯುಕ್ತ ರಾಮನಗರದ ರಂಗರಾಯರದೊಡ್ಡಿ ಕೆರೆಯಲ್ಲಿ ದೋಣಿ ವಿಹಾರ ಕೈಗೊಳ್ಳುವ ಮೂಲಕ ಬೋಟಿಂಗ್​, ವಾಟರ್​ ರೈಡಿಂಗ್​ ಸೇರಿ ಇತರ ಜಲಕ್ರೀಡೆಗಳಿಗೆ ಶಾಸಕ ಎಚ್​.ಎ.ಇಕ್ಬಾಲ್​ ಹುಸೇನ್​ ಶನಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಇಕ್ಬಾಲ್​ ಹುಸೇನ್​, ರಾಮನಗರ ಜನರ ಪಾಲಿಗೆ ಇದೊಂದು ಐತಿಹಾಸಿಕ ದಿನ. ಜಲ ಕ್ರೀಡೆಗಳ ಅನುಭವ ಪಡೆಯಲು ನಮ್ಮ ಜಿಲ್ಲೆ ಸೇರಿ ಸುತ್ತಮುತ್ತ ಯಾವ ಜಿಲ್ಲೆಯಲ್ಲೂ ಇಂತಹ ಅವಕಾಶ ಇರಲಿಲ್ಲ. ಈಗ ಪ್ರವಾಸೋದ್ಯಮ ಅಭಿವೃದ್ಧಿಯ ದೂರದೃಷ್ಟಿಯಿಂದ ಆಯ್ದ ಕೆರೆಗಳಲ್ಲಿ ಪ್ರವಾಸಿಗರ ಮನರಂಜನೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.

ರಂಗರಾಯರದೊಡ್ಡಿ ಕೆರೆ ಸೇರಿ ಬಿಡದಿಯ ನೆಲ್ಲಿಗುಡ್ಡ ಕೆರೆ, ಮಾಗಡಿ ವೈ.ಜಿ.ಗುಡ್ಡ ಕೆರೆ ಹಾಗೂ ಮರಳವಾಡಿ ಬಳಿಯ ರಾವುತ್ತನಹಳ್ಳಿ ಕೆರೆಯಲ್ಲಿ ಜಲ ಕ್ರೀಡೆಗಳ ಸೇವೆ ಲಭ್ಯವಿದೆ ಎಂದರು.

ಸಾಹಸ ಜಲ ಕ್ರೀಡೆಗಳು ಮಾತ್ರವಲ್ಲದೆ ಕೆರೆ ಬಳಿ ರೆಸ್ಟೋರೇಂಟ್​, ವಸತಿ ಗೃಹ, ಸುಸಜ್ಜಿತ ಶೌಚಗೃಹ ವ್ಯವಸ್ಥೆ ಸೇರಿ ಅಗತ್ಯ ಮೂಲಸೌಕರ್ಯಗಳನ್ನು ಮುಂದಿನ ದಿನಗಳಲ್ಲಿ ಕಲ್ಪಿಸಲಾಗುವುದು. ಟಿಕೆಟ್​ ದರಗಳು ಇನ್ನಷ್ಟೇ ನಿಗದಿ ಆಗಬೇಕು. ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡಲು ಸೂಚಿಸಲಾಗಿದೆ. ಸುಸಜ್ಜಿತ ವಿದ್ಯುತ್​ ದೀಪ ಅಳವಡಿಸಿ ರಾತ್ರಿ 8ರವರೆಗೆ ವಿಹಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಉಪಾಧ್ಯಕ್ಷೆ ಆಯಿಷಾಬಾನು, ಕೆಎಸ್​ಐಸಿ ಅದ್ಯಕ್ಷ ಎಸ್​.ಗಂಗಾಧರ್​, ಬಿಡಿಸಿಸಿ ಬ್ಯಾಂಕ್​ ಅಧ್ಯಕ್ಷ ವಿಜಯ್​ ದೇವು, ಟೂರಿಸ್​ಂ ಸೊಸೈಟಿ ಕಾರ್ಯದರ್ಶಿ ಅರುಣೇಶ್​ಗೌಡ, ಪೌರಾಯುಕ್ತ ಡಾ.ಜಯಣ್ಣ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್​ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net