

ಬೆಂಗಳೂರು: ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳಿಗೆ ಕನ್ನಡ ಬಾರದ ಖಾಸಗಿ ಚಾಲಕರನ್ನು ನೇಮಕ ಮಾಡಲಾಗುತ್ತಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿಯು, ಕನ್ನಡಿಗ ಚಾಲಕರನ್ನು ನೇಮಕ ಮಾಡುವಂತೆ ಆಗ್ರಹಿಸಿದೆ.
ಬಿಎಂಟಿಸಿಯಲ್ಲಿ ಇತ್ತೀಚೆಗೆ ಖಾಸಗಿ ಎಲೆಕ್ಟ್ರಿಕ್ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದು, ಈ ಬಸ್‌ಗಳ ಚಾಲಕರು ಸಹ ಖಾಸಗಿಯವರಾಗಿರುತ್ತಾರೆ. ಈ ಖಾಸಗಿ ಚಾಲಕರು ಹೊರ ರಾಜ್ಯದ ಕನ್ನಡ ಬಾರದವರಾಗಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದಾಗಿ ರಾಜ್ಯದಲ್ಲಿ ಕನ್ನಡದ ಮಣ್ಣಿನ ಮಕ್ಕಳು ಉದ್ಯೋಗದಿಂದ ವಂಚಿತರಾಗಿದ್ದಾರೆ. ಮಾತ್ರವಲ್ಲ ಇವರೊಂದಿಗೆ ಕರ್ತವ್ಯ ನಿರ್ವಹಿಸಲು ಕನ್ನಡಿಗ ನಿರ್ವಾಹಕರಿಗೂ ತೊಂದರೆಯಾಗಿದೆ ಎಂದು ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ತಿಳಿಸಿದ್ದಾರೆ.
ಸಾರಿಗೆ ಸಚಿವರು ಈ ವಿಷಯವಾಗಿ ಗಮನಹರಿಸಿ ಬಿಎಂಟಿಸಿಯಲ್ಲಿ ಕಾರ್ಯಾಚರಣೆಯಲ್ಲಿರುವ ಎಲ್ಲಾ ಖಾಸಗಿ ಎಲೆಕ್ಟ್ರಿಕ್ ವಾಹನಗಳಿಗೆ ಬಿಎಂಟಿಸಿ ಸಂಸ್ಥೆಯ ವತಿಯಿಂದ ಕನ್ನಡಿಗ ಚಾಲಕರನ್ನು ನೇಮಕ ಮಾಡಬೇಕು. ಈ ಮೂಲಕ ನಾಡಿನ ನಿರುದ್ಯೋಗಿ ಕನ್ನಡಿಗರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜತೆಗೆ ಸಂಸ್ಥೆಯಲ್ಲಿ ಕನ್ನಡದ ವಾತಾವರಣ ನಿರ್ಮಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನು ಬಳಿಗಾರ್ ಒತ್ತಾಯಿಸಿದ್ದಾರೆ.