

ಬೆಂಗಳೂರು: ತಮಗಿದ್ದ ಅನುಕೂಲತೆಯನ್ನೇ ದುರ್ಬಳಕೆ ಮಾಡಿಕೊಂಡು ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಬಿಎಂಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ. ವಿಠ್ಠಲ್ ಭಜಂತ್ರಿ ಹಾಗೂ ಶರಣಬಸಪ್ಪ ಎಂಬ ಬಿಎಂಟಿಸಿ ನೌಕರರು ಬಂಧಿತರು.
ವಿಠ್ಠಲ್ ಭಜಂತ್ರಿ ಹಾಗೂ ಶರಣಬಸಪ್ಪ ಬಿಎಂಟಿಸಿಯಲ್ಲಿ ಚಾಲಕ, ನಿರ್ವಾಹಕ ಆಗಿ ಕೆಲಸ ಮಾಡುತ್ತಿದ್ದು, ಸರ್ಕಾರಿ ಬಸ್ಗಳಲ್ಲಿ ತಮಗೆ ಮುಕ್ತವಾಗಿ ಓಡಾಡಲು ಇದ್ದ ಅವಕಾಶವನ್ನು ದುರ್ಬಳಕೆ ಮಾಡಿಕೊಂಡಿದ್ದರು. ಕೆಂಗೇರಿ ಸಮೀಪದ ತುರಹಳ್ಳಿ ಅರಣ್ಯ ಪ್ರದೇಶವನ್ನೇ ಅಡ್ಡೆ ಮಾಡಿಕೊಂಡಿದ್ದ ಆರೋಪಿಗಳು ಕಳೆದ ಮೂರು ವರ್ಷಗಳಿಂದ ಗಾಂಜಾ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು.
ಇವರು ವಿಜಯಪುರ ಮತ್ತು ಕಲಬುರಗಿಯಿಂದ ಗಾಂಜಾ ತಂದು ಒಂದು ಕಿಲೋಗ್ರಾಮ್ಗೆ 40ರಿಂದ 50 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸುಳಿವು ಪಡೆದ ಕೆಂಗೇರಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಬಂಧಿತರಿಂದ 9.8 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.