

ಕಾಸರಗೋಡು: ಜಿಲ್ಲೆಯನ್ನು ನಡುಗಿಸಿದ್ದ ವಕೀಲ ಸುಹಾಸ್ ಕೊಲೆ ಪ್ರಕರಣದ ಮರು ತನಿಖೆ ನಡೆಸುವಂತೆ ವಿಚಾರಣಾ ನ್ಯಾಯಾಲಯ ತಲಶ್ಯೇರಿಯ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.ಸ್ಟೇಟ್ ಕ್ರೈಂ ಬ್ರಾಂಚ್ ಕಾಸರಗೋಡು ಘಟಕ ಡಿವೈಎಸ್‌ಪಿ ಪಿ.ಮಧುಸೂದನನ್ ನಾಯರ್ ನೀಡಿದ ಅರ್ಜಿ ಪರಿಗಣಿಸಿ ಈ ಆದೇಶ ನೀಡಲಾಗಿದೆ.
2008ರ ಏಪ್ರಿಲ್‌ನಲ್ಲಿ ಕಾಸರಗೋಡು ಜಿಲ್ಲೆಯನ್ನು ಬೆಚ್ಚಿಬೀಳಿಸುವ ರೀತಿಯಲ್ಲಿ ನಡೆದಿದ್ದ ಸರಣಿ ಕೊಲೆಗಳಲ್ಲಿ ಖ್ಯಾತ ವಕೀಲ, ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಪಿ.ಸುಹಾಸ್(38) ಅವರದ್ದೂ ಒಂದಾಗಿತ್ತು. 2008 ಏಪ್ರಿಲ್ ತಿಂಗಳಲ್ಲಿ ಒಂದು ವಾರ ಕಾಲಾವಧಿಯಲ್ಲಿ ಕಾಸರಗೋಡು ನಗರದ ಆಸುಪಾಸು ನಾಲ್ಕು ಮಂದಿಯ ಬರ್ಬರ ಹತ್ಯೆ ನಡೆದಿತ್ತು. 2008 ಏ.17ರಂದು ನಗರದ ಕೋಟೆ ರಸ್ತೆಯಲ್ಲಿರುವ ವಕೀಲರ ಕಚೇರಿ ವಠಾರದಲ್ಲಿ ದುಷ್ಕರ್ಮಿಗಳ ತಂಡ ಸುಹಾಸ್ ಅವರನ್ನು ಎದೆ, ಕತ್ತು, ಹೊಟ್ಟೆ ಭಾಗಕ್ಕೆ ಮಾರಕಾಯುಧದಿಂದ ಇರಿದು ಬರ್ಬರವಾಗಿ ಕೊಲೆ ನಡೆಸಿರುವ ಬಗ್ಗೆ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ಸುಹಾಸ್ ಕೊಲೆ ಪ್ರಕರಣದ ವಿಚಾರಣೆ ಸರಿಯಾದ ರೀತಿಯಲ್ಲಿ ನಡೆದಿಲ್ಲ ಎಂಬ ಕಾರಣದಿಂದ ಪ್ರಕರಣದ ಮರುತನಿಖೆ ನಡೆಸಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಬಿ.ಎಂ.ರಫೀಕ್, ಎ.ಎ.ಅಬ್ದುಲ್ ರಹೀಂ ಅಲಿಯಾಸ್ ಅಮ್ಮಿ, ಅಬ್ದುಲ್ ರಹಮಾನ್ ಅಲಿಯಾಸ್ ರಹೀಂ, ಶಾಫಿರ್, ಅಹಮ್ಮದ್ ಶಿಹಾಬ್ ಹಾಗೂ ಅಹಮ್ಮದ್ ಸಫ್ವಾನ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಆರೋಪಿಗಳ ಪರ ವಾದಿಸಲು ಜಿಲ್ಲೆಯ ವಕೀಲರು ಮುಂದಾಗದಿದ್ದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ತಲಶ್ಯೇರಿ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಅಲ್ಲಿ ವಿಚಾರಣೆ ಆರಂಭಗೊಂಡಿತ್ತಾದರೂ, ನಂತರ ಸ್ಥಗಿತಗೊಂಡಿತ್ತು.