‘ಸಂಸ್ಕೃತಿ’ ಅಂತರ ಕಾಲೇಜು ಸ್ಪರ್ಧೆಗೆ ಅದ್ದೂರಿ ಚಾಲನೆ

Sudhee_09_Samskruthi_2024_@_BMSCCM_VV_Puram (4)
Published on

ಬೆಂಗಳೂರು: ನಗರದ ವಿಶ್ವೇಶ್ವರಪುರದ ಬಿಎಂಎಸ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹಾಗೂ ಬಿಎಂಎಸ್ ಸಂಜೆ ಕಲೆ ಮತ್ತು ವಾಣಿಜ್ಯ ಕಾಲೇಜು ಹಾಗೂ ಪ್ರೋಸರ್ವ್ ಐಎನ್‌ಸಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ಅಂತರ ಕಾಲೇಜು ಸ್ಪರ್ಧೆ ‘ಸಂಸ್ಕೃತಿ- 2024’ಗೆ ಅದ್ದೂರಿ ಚಾಲನೆ ದೊರೆಯಿತು.

ಶನಿವಾರವರೆಗೆ (ಮೇ 11) ನಡೆಯಲಿರುವ ಉತ್ಸವಕ್ಕೆ ರಾಜ್ಯಸಭೆ ಸದಸ್ಯ ಹಾಗೂ ನಟ ಜಗ್ಗೇಶ್ ಬುಧವಾರ ಚಾಲನೆ ನೀಡಿದರು. ಬಿಎಂಎಸ್‌ಇಟಿ ಸದಸ್ಯ ಕಾರ್ಯದರ್ಶಿ ಡಾ. ಬಿ.ಎಸ್. ರಾಗಿಣಿ ನಾರಾಯಣ್, ಟ್ರಸ್ಟಿ ಅವಿರಾಮ್ ಶರ್ಮ, ಕಾಲೇಜು ಪ್ರಾಂಶುಪಾಲ ಡಾ. ಪಂಕಜ್ ಚೌಧರಿ, ಚಿತ್ರನಟಿ ಚೈತ್ರಾ ವಾಸುದೇವನ್ ಇತರರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ನಟ ಜಗ್ಗೇಶ್, ವಿದ್ಯಾರ್ಥಿ ಜೀವನವನ್ನು ಸದ್ಬಳಕೆ ಮಾಡಿಕೊಂಡಲ್ಲಿ ಭವಿಷ್ಯ ಅತ್ಯುತ್ತಮವಾಗಿರುತ್ತದೆ. ಈ ವಯಸ್ಸಿನಲ್ಲಿ ಕಣ್ಣು ಅಕ್ಕ-ಪಕ್ಕ ಹೊರಳುವುದು ಸಾಮಾನ್ಯ, ಹಾಗೆ ಮಾಡದೆ ನೇರ ದೃಷ್ಟಿ ಇಟ್ಟುಕೊಂಡು ಗುರಿ ತಲುಪಬೇಕು ಎಂದು ಹಾಸ್ಯದೊಂದಿಗೆ ಸಲಹೆ ನೀಡಿದರು.

ಪಿಯುಸಿಯಲ್ಲಿ ಹಲವು ಬಾರಿ ಫೇಲಾದೆ: ಬಿಎಂಎಸ್ ಕಾಲೇಜಿನಲ್ಲಿ ಪತ್ನಿ ಕಲಿಯುತ್ತಿದ್ದಾಗ, ಆಕೆಯನ್ನು ಡ್ರಾಪ್ ಮಾಡಲು ಬರುತ್ತಿದ್ದೆ. ಆ ಮೂಲಕ ಈ ಕಾಲೇಜಿನೊಂದಿಗೆ ನನ್ನ ನಂಟು ಬೆಳೆಯಿತು. ಹಲವು ಬಾರಿ ಫೇಲ್ ಆದ ಬಳಿಕ ಪಿಯುಸಿ ಪಾಸ್ ಮಾಡಿದೆ. ನಂತರ ಶೇಷಾದ್ರಿಪುರಂ ಕಾಲೇಜಿನಲ್ಲಿ ಪದವಿಗೆ ಸೇರಿದೆ, ಆದರೆ ಪೂರ್ಣ ಆಗಲಿಲ್ಲ. ನನ್ನಲ್ಲಿದ್ದ ಕಲೆಯಿಂದಾಗಿ ಬಚಾವಾದೆ. ಆದರೆ ಆ ಅದೃಷ್ಟ ಎಲ್ಲರಿಗೂ ಇರುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಕಾಲೇಜು ಜೀವನವನ್ನು ಸಂಭ್ರಮಿಸುವುದರ ಜತೆಗೆ ಓದಿನಲ್ಲೂ ಗಮನ ಹರಿಸಬೇಕು ಎಂದು ಜಗ್ಗೇಶ್ ಸಲಹೆ ನೀಡಿದರು.

ಪ್ರತಿಭೆಗಳಿಗೆ ವೇದಿಕೆ: ಕಳೆದ ಮೂರು ವರ್ಷಗಳಿಂದ ಈ ಅಂತರ ಕಾಲೇಜು ಸ್ಪರ್ಧೆಯನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಬರಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ವಿಶಿಷ್ಟ ರೀತಿಯಲ್ಲಿ ವಿಸ್ತರಣೆ ಹೊಂದುತ್ತ ಸಾಗುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಇದೊಂದು ಉತ್ತಮ ವೇದಿಕೆ ಕಲ್ಪಿಸಿಕೊಡಲಿದೆ ಎಂದು ಅವಿರಾಮ್ ಶರ್ಮ ಹೇಳಿದರು.

ಅಂತರ ಕಾಲೇಜು ಸ್ಪರ್ಧೆಯಲ್ಲಿ ಬೆಂಗಳೂರು ಸೇರಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ ತಮ್ಮ ಪ್ರತಿಭಾ ಪ್ರದರ್ಶನ ನೀಡಿದರು. 11ರಂದು ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ಗಾಯಕ ಕುನಾಲ್ ಗಾಂಜಾವಾಲಾ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net