

ಬೆಂಗಳೂರು: ಬಾರದ ಲೋಕಕ್ಕೆ ಪಯಣಿಸಿದ ನಟಿ, ನಿರೂಪಕಿ ಅಪರ್ಣಾ ಕನ್ನಡಿಗರಿಗೆ ಇನ್ನು ನೆನಪು ಮಾತ್ರ. ತಮ್ಮ ಸ್ವಚ್ಛ ಮಾತುಗಳಿಂದಿಂದಲೇ ಪ್ರತಿಯೊಬ್ಬ ಕನ್ನಡಿಗನ ಮನದಲ್ಲಿ ನೆಲೆಯೂರಿದ್ದ ಅಪರ್ಣಾ ಅವರು ಇನ್ನಿಲ್ಲ ಎಂಬ ಸುದ್ದಿ ಬಣ್ಣದ ಲೋಕಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಕ್ಯಾನ್ಸರ್ ಎಂಬ ಮಹಾಮಾರಿ ಕನ್ನಡತಿಯನ್ನು ಬಲಿ ಪಡೆದಿದ್ದು, ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿದೆ.
ಸರ್ಕಾರದ ಯಾವುದೇ ಕಾರ್ಯಕ್ರಮವಾಗಲಿ ಅಪರ್ಣಾ ಅವರ ಉಪಸ್ಥಿತಿ ಇರಬೇಕಿತ್ತು. ತಮ್ಮ ಸ್ವಚ್ಛ ಕನ್ನಡದಲ್ಲಿ ಅತಿಥಿಗಳನ್ನು ಆಗಮಿಸುತ್ತಿದ್ದ ಪರಿ, ವೇದಿಕೆಗೆ ಅವರು ತರುತ್ತಿದ್ದ ಕಳೆ ನೆರೆದಿದ್ದವರನ್ನು ಖುಷಿಪಡಿಸುತ್ತಿತ್ತು. ಕೇವಲ ತಮ್ಮ ಧ್ವನಿ ಹಾಗೂ ಸ್ಪಷ್ಟ ಕನ್ನಡ ಪದಗಳ ಬಳಕೆಯಿಂದಲೇ ಎಲ್ಲರ ಗಮನಸೆಳೆದಿದ್ದ ಅಪರ್ಣಾ ಅವರು ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋಗೂ ಕೂಡ ಧ್ವನಿಯಾಗಿದ್ದರು ಎಂಬುದು ವಿಶೇಷ.
ಅಪರ್ಣಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಬಿಎಂಆರ್ಸಿಎಲ್ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಅದೆಷ್ಟೋ ಮೆಟ್ರೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹೆಗ್ಗಳಿಕೆ ಇವರದ್ದು. ಇವರಿಗೆ ಭಾಷೆಯ ಮೇಲಿನ ಹಿಡಿತ ಮತ್ತು ಉಚ್ಛಾರಣೆ ಎರಡೂ ಕರಗತವಾಗಿತ್ತು. ಇವರ ಧ್ವನಿ ನಮ್ಮ ಮೆಟ್ರೋವಿನಲ್ಲಿ ಎಂದೆಂದಿಗೂ ಜೀವಂತ. ಮುಂದಿನ ಬಾರಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಸವಿ ಸವಿಯಿರಿ ಎಂದು ಬರೆದುಕೊಂಡಿದೆ.
ನಟಿಯಾಗಿ ಗಂಭೀರ ಪಾತ್ರಗಳನ್ನು ನಿರ್ವಹಿಸಿದ್ದ ಅಪರ್ಣಾ ಅವರು, ಜನರನ್ನು ನಕ್ಕು ನಲಿಸುವ ದಿನವೂ ಮುಂದೊಂದು ದಿನ ಬರುತ್ತದೆ ಎಂದು ಯಾರೂ ಸಹ ಊಹಿಸಿರಲಿಲ್ಲ. ಯಾಕಂದರೆ, ‘ಮಸಣದ ಹೂವು’ ಸಿನಿಮಾದಿಂದ ಧಾರವಾಹಿಗಳಲ್ಲಿ ಅಭಿನಯಿಸಿದ ಅಪರ್ಣಾ, ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳ ನಿರೂಪಣೆ ಮಾಡಿದವರು. ತೂಕದ ವ್ಯಕ್ತಿತ್ವ, ಸ್ಪಷ್ಟ ಉಚ್ಚಾರಣೆ, ಸ್ವಚ್ಛ ಕನ್ನಡದಿಂದಲೇ ಎಲ್ಲರ ಮನಸೂರೆಗೊಳಿಸುತ್ತಿದ್ದ ನಟಿ, ‘ಮಜಾ ಟಾಕೀಸ್’ನಂತಹ ಕಾಮಿಡಿ ಕಾರ್ಯಕ್ರಮದ ಮೂಲಕ ಜನರ ಮುಖದಲ್ಲಿ ಮಂದಹಾಸ ತಂದಿದ್ದು, ನಿಜಕ್ಕೂ ಮರೆಯಲು ಸಾಧ್ಯವಿಲ್ಲ. ಇದೀಗ ಕನ್ನಡದ ಧ್ವನಿ ಪಂಚಭೂತಗಳಲ್ಲಿ ಲೀನರಾಗಿರಯವ ವಿಚಾರ ಚಿತ್ರರಂಗಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ.