

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಮತ್ತು ಗ್ರೀನ್ ರೇಟಿಂಗ್ ಫಾರ್ ಇಂಟಿಗ್ರೇಟೆಡ್ ಹ್ಯಾಬಿಟಾಟ್ ಅಸೆಸ್ಮೆಂಟ್ ಕೌನ್ಸಿಲ್ (ಜಿಆರ್ಐಎಚ್ಎ) ಹೈದರಾಬಾದ್ನಲ್ಲಿ ಶುಕ್ರವಾರ ನಡೆದ 2ನೇ ಜಿಆರ್ಐಎಚ್ಎ ಪ್ರಾದೇಶಿಕ ಸಮಾವೇಶದಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಮಾಡಿವೆ.
ಗೃಹ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಸೇಠ್ ಮತ್ತು ಬಿಎಂಆರ್ಸಿಎಲ್ ಪರವಾಗಿ ವಾಸ್ತುಶಿಲ್ಪಿ ಆಶಿಶ್ ಕಪೂರ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಬಿಎಂಆರ್ಸಿಎಲ್ನ ನಿಯೋಜನೆ ಮತ್ತು ಯೋಜನಾ ನಿರ್ದೇಶಕ ಡಿ. ರಾಧಾಕೃಷ್ಣ ರೆಡ್ಡಿ, ಸಿವಿಲ್ ಸಲಹೆಗಾರ ಅಭಯ್ಕುಮಾರ್ ರೈ ಇದ್ದರು.
ಒಪ್ಪಂದದ ಮೂಲಕ ಎರಡೂ ಸಂಸ್ಥೆಗಳು ಹಸಿರು ಕಟ್ಟಡ ನಿರ್ಮಾಣವನ್ನು ಉತ್ತೇಜಿಸುತ್ತವೆ. ಒಪ್ಪಂದದ ವ್ಯಾಪ್ತಿಯಡಿಯಲ್ಲಿ ಸಂಬಂಧಪಟ್ಟ ತರಬೇತಿ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ಹಸಿರು ಕಟ್ಟಡಗಳ ೇತ್ರದಲ್ಲಿ ಸಾಮರ್ಥ್ಯ ವೃದ್ಧಿ, ಗೃಹ ರೇಟಿಂಗ್ಗಾಗಿ ಯೋಜನೆಗಳ ನೋಂದಣಿ ಮತ್ತು ವಿವಿಧ ವೇದಿಕೆಗಳಲ್ಲಿ ಮಾಹಿತಿಯ ಪ್ರಸಾರವನ್ನು ಹಂಚಿಕೊಳ್ಳುವುದನ್ನು ಒಳಗೊಂಡಿದೆ.
ಈ ತಿಳಿವಳಿಕೆ ಒಪ್ಪಂದವು ನಮ್ಮ ಮೆಟ್ರೋ ಕಾರಿಡಾರ್ಗಳ ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಸಮಯದಲ್ಲಿ ಹಸಿರು ಕಟ್ಟಡದ ಕಲ್ಪನೆಯನ್ನು ಹೆಚ್ಚು ಅಳವಡಿಸಿಕೊಳ್ಳಲು ಮತ್ತು ನಮ್ಮ ಮೆಟ್ರೋ ನಿಲ್ದಾಣಗಳ ಗ್ರೀನ್ ಬಿಲ್ಡಿಂಗ್ ಪ್ರಮಾಣೀಕರಣ ಪಡೆಯಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.