

ಬೆಂಗಳೂರು: ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇದಿನೆ ನಾನಾ ಬೆಳವಣಿಗೆಗಳು ಕಾಣಿಸುತ್ತಿದ್ದು, ಪ್ರಕರಣ ಕುರಿತ ಕುತೂಹಲ ಕೂಡ ಹೆಚ್ಚುತ್ತಲೇ ಹೋಗುತ್ತಿದೆ.
ಬ್ಯಾಡರಹಳ್ಳಿಯ ನಿವಾಸಿ ಶಂಕರ್ ಅವರ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರೊಂದಿಗೆ ಮೊಮ್ಮಗು ಕೂಡ ಮೃತಪಟ್ಟಿತ್ತು. ಆದರೆ ಈ ಐವರ ಸಾವಿನ ಪ್ರಕರಣ ಐದು ದಿನಗಳ ಬಳಿಕ ಬೆಳಕಿಗೆ ಬಂದಿದ್ದು, ಅಷ್ಟೂ ದಿನ ಆ ಶವಗಳ ಜೊತೆ ಶಂಕರ್ ಅವರ ಪುತ್ರಿ ಸಿಂಚನಾಳ ಎರಡೂವರೆ ವರ್ಷದ ಮಗು ಜೀವಂತ ಇದ್ದಳು.
ಹೀಗೆ ಐದು ದಿನಗಳ ಕಾಲ ಶವಗಳ ಜತೆಗಿದ್ದರೂ ಪವಾಡಸದೃಶ ಎಂಬಂತೆ ಬದುಕುಳಿದಿರುವ ಎರಡೂವರೆ ವರ್ಷದ ಮಗುವನ್ನು ಇಂದು ರಕ್ತಪರೀಕ್ಷೆಗೆ ಒಳಪಡಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿರುವ ಪೊಲೀಸರು ಮಗುವಿನ ರಕ್ಷಪರೀಕ್ಷೆ ಮಾಡಿಸಿದ್ದಾರೆ. ಈ ಪರೀಕ್ಷೆ ಮಗುವಿನ ಆರೋಗ್ಯ ದೃಷ್ಟಿಯಿಂದಲೋ ಅಥವಾ ಮುಂದಿನ ತನಿಖೆಯ ದೃಷ್ಟಿಯಿಂದಲೋ ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಆತ್ಮಹತ್ಯೆ ನಡೆದ ಐದು ದಿನಗಳ ಬಳಿಕ ಅಂದರೆ ಸೆ. 17ರಂದು ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ವಿನಾಯಕ ನಗರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಕೊಳೆತ ಸ್ಥಿತಿಯಲ್ಲಿದ್ದ ಐದು ಶವಗಳ ಜತೆ ಈ ಎರಡೂವರೆ ವರ್ಷದ ಮಗು ನಿತ್ರಾಣ ಸ್ಥಿತಿಯಲ್ಲಿ ಇದ್ದಿದ್ದಳು.