

ಮಳವಳ್ಳಿ: ನೀರಿನ ವಿಚಾರದಲ್ಲಿ ಕಾವೇರಿ ಕೊಳ್ಳದ ರೈತರ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಶಾಶ್ವತ ಪರಿಹಾರ ಕೊಡಿಸಬೇಕೆಂದು ಕರವೇ ತಾಲೂಕು ಅಧ್ಯಕ್ಷ ಅಪ್ಪೇಗೌಡ ಆಗ್ರಹಿಸಿದರು.
ಪಟ್ಟಣದಲ್ಲಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಲ್ಲಿ ಪತ್ರ ಬರೆದು ಪ್ರಧಾನಮಂತ್ರಿಗೆ ಕಳುಹಿಸುವ ಚಳವಳಿಯಲ್ಲಿ ಮಾತನಾಡಿದ ಅವರು, ಕಾವೇರಿ ನ್ಯಾಯಾಧೀಕರಣ ಹಾಗೂ ಸುಪ್ರೀಂಕೋರ್ಟ್ ಆದೇಶ ರೈತ ವಿರೋಧಿಯಾಗಿದೆ. ಕನ್ನಂಬಾಡಿ ಕಟ್ಟೆಯಲ್ಲಿ ನೀರು ಖಾಲಿಯಾಗಿದ್ದು, ಕುಡಿಯುವ ನೀರು ಸೇರಿದಂತೆ ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿವೆ. ರಾಜ್ಯ ಸರ್ಕಾರ ಹಾಗೂ ಇಲ್ಲಿನ ಜನ ನಾಯಕರಿಗೆ ಕಾವೇರಿ ವಿಚಾರವನ್ನು ತಮ್ಮ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು ಪರಿಹಾರ ಸೂತ್ರ ಕಂಡುಕೊಳ್ಳುವ ಗೋಜಿಗೆ ಹೋಗುತ್ತಿಲ್ಲ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರವೇ ತಾಲೂಕು ಮಹಿಳಾ ಅಧ್ಯಕ್ಷೆ ವಿಜಯಾ, ಪದಾಧಿಕಾರಿಗಳಾದ ಎಚ್.ಸಿ.ಗಂಗರಾಜು, ಮಲ್ಲಿಕಾರ್ಜುನ, ಸಿದ್ದಪ್ಪ, ಮಂಜುಳಾ, ಮಂಗಳ, ಜಗದೀಶ್ ಸೇರಿದಂತೆ ಇತರರಿದ್ದರು.