

ಕಿಕ್ಕೇರಿ: ಪ್ರಸ್ತುತ ದಿನಮಾನದಲ್ಲಿ ಆರೋಗ್ಯ ಸಮಸ್ಯೆ ಎಲ್ಲರನ್ನೂ ಕಾಡುತ್ತಿದ್ದು, ಮುಂಜಾಗ್ರತೆ ಅವಶ್ಯ ಎಂದು ಆರ್‌ಟಿಒ ಅಧಿಕಾರಿ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ತಿಳಿಸಿದರು.
ಇಲ್ಲಿನ ಹಿಂದು ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಬುಧವಾರ 4ನೇ ವಾರ್ಷಿಕೋತ್ಸವ ಸಮಾರಂಭದ ಪ್ರಯುಕ್ತ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಅಪಘಾತ, ರಕ್ತಹೀನತೆ ವೇಳೆ ರಕ್ತ ಜೀವರಕ್ಷಕವಾಗಿದೆ. ರಕ್ತದಾನಕ್ಕಿಂತ ಪವಿತ್ರವಾದ ದಾನ ಮತ್ತೊಂದಿಲ್ಲ. ರಕ್ತ ನೀಡಿದಷ್ಟೂ ಮತ್ತಷ್ಟು ಶೇಖರಣೆ ಆಗಲಿದೆ. ರಕ್ತದಾನ ಮಾಡುವುದರಿಂದ ಹೊಸರಕ್ತಕಣ ಉತ್ಪತ್ತಿ ಜತೆಗೆ ಆರೋಗ್ಯ ಚೈತನ್ಯ ಲಭಿಸಲಿದೆ ಎಂದರು.
ಹೋಬಳಿಯ ಹತ್ತಾರು ಗ್ರಾಮಗಳ ನಾಗರಿಕರು ಆರೋಗ್ಯ ತಪಾಸಣೆಗೆ ಒಳಗಾದರು. ಹೃದ್ರೋಗ, ಮಧುಮೇಹ, ಇಸಿಜಿ, ರಕ್ತ ಪರೀಕ್ಷೆ, ಬಿಪಿ ಮತ್ತಿತರ ಸಮಸ್ಯೆಗಳ ತಪಾಸಣೆ ಮಾಡಲಾಯಿತು. ಚನ್ನರಾಯಪಟ್ಟಣ ಪುನರ್ಜೀವ ಸ್ವಯಂ ಸೇವಾ ಸಂಸ್ಥೆ ರಕ್ತ ಸಂಗ್ರಹಣೆ ಕೇಂದ್ರ ಹಾಗೂ ಮೈಸೂರಿನ ನಾರಾಯಣ ಆಸ್ಪತ್ರೆ ತಪಾಸಣೆಯ ನೇತೃತ್ವ ವಹಿಸಿತ್ತು. ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ, ಬಿಪಿಯಂತಹ ಸಮಸ್ಯೆಗಳೇ ಹೆಚ್ಚಾಗಿ ತಪಾಸಣೆಯಲ್ಲಿ ಕಂಡು ಬಂತು. 35 ಜನರು ರಕ್ತದಾನ ಮಾಡಿದರು. 97ಜನರು ತಪಾಸಣೆಗೊಳಪಟ್ಟರು.
ಮಲ್ಲಿಕಾರ್ಜುನ ಅಭಿಮಾನಿ ಬಳಗ ಅಧ್ಯಕ್ಷ ಗಂಜಿಗೆರೆ ಮಹೇಶ್, ಅಕ್ಷಯ್, ಪುನೀತ್, ಚೇತನ್, ಭರತ್, ಪವನ್, ದರ್ಶನ್, ಶ್ಯಾಮ್, ಗೌತಮ್ ಮತ್ತಿತರರಿದ್ದರು.