

ಹುಣಸೂರು: ಹುಣಸೂರು ರೋಟರಿ ಕ್ಲಬ್, ವಿವೇಕಾನಂದ ಯೂತ್ ಮೂವ್‌ಮೆಂಟ್ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 60ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
ಗುರುವಾರ ನಗರದ ರೋಟರಿ ಭವನದಲ್ಲಿ ಆಯೋಜಿಸಿದ್ದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಅಧ್ಯಕ್ಷ ಚನ್ನಕೇಶವ, ರಕ್ತದಾನದಿಂದ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರಾಗುತ್ತದೆ, ಶಕ್ತಿ ಕುಂದುತ್ತದೆ ಎಂಬಿತ್ಯಾದಿ ಪುಕಾರುಗಳನ್ನು ಹಬ್ಬಿಸಲಾಗಿದೆ. ಇದ್ಯಾವುದೂ ನಿಜವಲ್ಲ. ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಿದಲ್ಲಿ ಆತನ ಆರೋಗ್ಯ ಇನ್ನಷ್ಟು ಸದೃಢವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ರಕ್ತದಾನದಿಂದ ಅಮಾಯಕ ಜೀವಗಳು ಉಳಿಯುತ್ತವೆ ಎಂದರು.
ಶಿಬಿರದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ಪ್ರಸನ್ನ, ಇನ್ನರ್‌ವ್ಹೀಲ್ ಅಧ್ಯಕ್ಷೆ ಸ್ಮಿತಾ ದಯಾನಂದ್, ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಚಾಲಕ ರಾಜೇಶ್, ಜ್ಞಾನಧಾರ ಕಾಲೇಜು ಪ್ರಾಂಶುಪಾಲ ಕಾರ್ತಿಕ್, ಚಿಗುರು ಸಂಸ್ಥೆಯ ಶಂಕರ್, ಸರ್ಕಾರಿ ಐಟಿಐ ಕಾಲೇಜಿನ ರಾಜೇಶ್ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಸರ್ಕಾರಿ ನೌಕರರು ಭಾಗವಹಿಸಿದ್ದರು. ರಕ್ತದಾನ ಮಾಡಿದ ದಾನಿಗಳಿಗೆ ರೋಟರಿ ಸಂಸ್ಥೆ ವತಿಯಿಂದ ಪ್ರಶಂಸನಾಪತ್ರ ನೀಡಲಾಯಿತು.