ರಕ್ತದಾನ, ಕಣ್ಣಿನ ಉಚಿತ ತಪಾಸಣೆ

21SPT1
ಸೋಮವಾರಪೇಟೆ ಜಲಾಲೀಯ ಮಸಿದಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕರಿಗೆ ರಕ್ತದಾನ ಶಿಬಿರದಲ್ಲಿ ದಾನಿಗಳು ರಕ್ತದಾನ ಮಾಡಿದರು.
Published on

ಸೋಮವಾರಪೇಟೆ: ಇಲ್ಲಿನ ಜಲಾಲಿಯ ಮಸೀದಿ, ಜಲಾಲಿಯ ಮಿಲಾದ್ ಕಮಿಟಿ ಹಾಗೂ ಕೊಡಗು ಜಿಲ್ಲಾ ರಕ್ತನಿಧಿ ಕೇಂದ್ರದ ಆಶ್ರಯದಲ್ಲಿ ಈದ್ ಮಿಲಾದ್ ಅಂಗವಾಗಿ ಗುರುವಾರ ಬೆಳಗ್ಗೆ 10 ರಿಂದ ಜಲಾಲಿಯ ಸಭಾಂಗಣದಲ್ಲಿ ಸಾರ್ವಜನಿಕರಿಗೆ ರಕ್ತದಾನ ಮತ್ತು ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಸತೀಶ್ ಮಾತನಾಡಿ, ರಕ್ತಕ್ಕೆ ಪರ್ಯಾಯವಾಗಿ ಕೃತಕ ರಕ್ತ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಅದು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಒಬ್ಬರ ರಕ್ತದಿಂದ ನಾಲ್ಕು ಜನರ ಪ್ರಾಣ ಉಳಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಮುಂದೆ ಬರಬೇಕೆಂದರು.

ತಾಲೂಕು ಕೇಂದ್ರಗಳಲ್ಲೂ ಉಪ ರಕ್ತನಿಧಿ ಕೇಂದ್ರವನ್ನು ಪ್ರಾರಂಭಿಸಿರುವುದರಿಂದ ತಿಂಗಳಿಗೆ 30 ರಿಂದ 40 ಯೂನಿಟ್ ರಕ್ತದ ಬೇಡಿಕೆ ಇದೆ. ಇಂದು ಜಿಲ್ಲೆಯಲ್ಲಿ ಸುಮಾರು 200 ರಿಂದ 300 ಯೂನಿಟ್ ರಕ್ತದ ಅವಶ್ಯಕತೆ ಇದ್ದು, ರಕ್ತದಾನ ಶಿಬಿರಗಳು ಹೆಚ್ಚಾಗಿ ಆಯೋಜನೆ ಮಾಡಬೇಕಿದೆ ಎಂದರು.

ಜಲಾಲಿಯ ಮಸೀದಿಯ ಕಮಿಟಿ ಕಾರ್ಯದರ್ಶಿ ಕಬೀರ್ ಮಾತನಾಡಿ, ಇಂದು ಸಮಾಜದಲ್ಲಿ ಪ್ರೀತಿ, ವಿಶ್ವಾಸ ಕಡಿಮೆಯಾಗುತ್ತಿದೆ. ಜಾತಿ ಧರ್ಮದ ಹೆಸರಿನಲ್ಲಿ ಮನುಷ್ಯತ್ವ ಕಳೆದುಕೊಳ್ಳಲಾಗಿದೆ. ಆದರೆ, ರಕ್ತಕ್ಕೆ ಯಾವುದೇ ಜಾತಿ, ಧರ್ಮದ ನಂಟಿಲ್ಲ. ತುರ್ತು ಸಂದರ್ಭ ಮತ್ತೊಬ್ಬರ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುತ್ತದೆ. ದಾನಿಗಳು ರಕ್ತದಾನಕ್ಕೆ ಮುಂದಾಗಬೇಕೆಂದರು.

ಕಾರ್ಯಕ್ರಮವನ್ನು ಜಲಾಲಿಯ ಮಸೀದಿಯ ಹಮೀದ್ ಸಖಾಫಿ ಉದ್ಘಾಟಿಸಿದರು. ವೇದಿಕೆಯಲ್ಲಿ ಮಸೀದಿ ಅಧ್ಯಕ್ಷರಾದ ಎಂ.ಬಿ. ಇಬ್ರಾಹಿಂ, ರಕ್ತ ನಿಧಿ ಕೇಂದ್ರ ವೈದ್ಯರಾದ ರಶ್ಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net