ರಕ್ತದಾನ ಜವಾಬ್ದಾರಿಯುವ ನಾಗರಿಕರ ಕರ್ತವ್ಯವಾಗಲಿ - ಸಚಿವ ದಿನೇಶ್ ಗುಂಡೂರಾವ್

Red corss - 1
Published on

ಬೆಂಗಳೂರು: ರಸ್ತೆ ಅಪಘಾತ ಸೇರಿ ನಾನಾ ಸಂದರ್ಭದಲ್ಲಿ ರೋಗಿಯ ಜೀವ ಉಳಿಸಲು ರಕ್ತದ ಅಗತ್ಯವಿದೆ. ಹಾಗಾಗಿ ರಕ್ತದಾನ ಪ್ರತಿಯೊಬ್ಬ ಜವಾವ್ದಾರಿಯುತ ನಾಗರಿಕರ ಕರ್ತವ್ಯವಾಗಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಪ್ರಯುಕ್ತ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ ನಗರದಲ್ಲಿ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತದಾನ ಕೇವಲ ಸಮಾಜಸೇವಾ ಕಾರ್ಯ ಮಾತ್ರವಲ್ಲ. ಶ್ರೇಷ್ಠ ಮತ್ತು ಸಾರ್ಥಕ ಸೇವೆ. ಹಾಗಾಗಿ ರಕ್ತದಾನಿಗಳು ಇತರರನ್ನೂ ರಕ್ತದಾನ ಮಾಡುವಂತೆ ಪ್ರೇರೇಪಿಸಬೇಕು. ರಕ್ತದ ಕೊರತೆ ನೀಗಿಸಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಹತ್ವದ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಡಿಜಿಪಿ ಕಮಲ್ ಪಂತ್ , ರಕ್ತದಾನ ರಕ್ತದ ಕೊರತೆ ನೀಗಿಸುವ ಹಾಗು ಜೀವ ಉಳಿಸುವ ಮಹತ್ಕಾರ್ಯ. ರಕ್ತದಾನದಿಂದ ರೋಗಿ ಬುದುಕುಳಿಯುವುದು ಮಾತ್ರವಲ್ಲದೆ, ದಾನಿಯ ಆರೋಗ್ಯವೂ ಚೆನ್ನಾಗಿರುತ್ತದೆ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಸಭಾಪತಿ ವಿಜಯಕುಮಾರ್ ಪಾಟೀಲ ಶಾವಂತಗೇರಾ, ಮಾತನಾಡಿ, ಸಂಸ್ಥೆಯು ಪ್ರತಿ ವರ್ಷ 27 ಸಾವಿರ ಯೂನಿಟ್ ರಕ್ತವನ್ನು ವಿವಿಧ ರಕ್ತನಿಧಿ ಕೇಂದ್ರಗಳಿಗೆ ಒದಗಿಸುತ್ತಿದೆ. ಬಡ ರೋಗಿಗಳಿಗೆ 5 ಸಾವಿರ ಯೂನಿಟ್ ರಕ್ತವನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 2022-23ನೇ ಸಾಲಿನಲ್ಲಿ ಹೆಚ್ಚು ಯೂನಿಟ್ ರಕ್ತ ದಾನ ಮಾಡಿದ 10 ಮಂದಿ ಹಾಗೂ ರಕ್ತ ದಾನ ಶಿಬಿರದ ಆಯೋಜಕರನ್ನು ಗೌರವಿಸಲಾಯಿತು. ಇದೇ ವೇಳೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ ವತಿಯಿಂದ ರಾಜ್ಯದ ಆಸ್ಪತ್ರೆಗಳಿಗೆ ಒದಗಿಸಲು 10 ಸಾವಿರ ಪಲ್ಸ್ ಆಕ್ಸಿಮೀಟರ್ ಹಾಗೂ 100 ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಇಲಾಖೆಗೆ ಉಚಿತವಾಗಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net