

ಪುತ್ತೂರು ಗ್ರಾಮಾಂತರ: ರಕ್ತದಾನ ಮಾಡುವುದು ಪುಣ್ಯದ ಕೆಲಸ. ಯುವಕರೆಲ್ಲರೂ ಒಗ್ಗಟಿನಿಂದ ಸಮಾಜಮುಖಿ ಕಾರ್ಯ ಮಾಡಿದಾಗ ಸಂಘಟನೆ ಬೆಳೆಯುತ್ತದೆ. ಜತೆಗೆ ಸಮಾಜಕ್ಕೂ ಪ್ರಯೋಜನವಾಗುತ್ತದೆ ಎಂದು ಪುತ್ತೂರು ರೋಟರಿ-ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಡಾ.ಸೀತಾರಾಮ ಭಟ್ ಹೇಳಿದರು.
ಕೊಳ್ತಿಗೆ ಗ್ರಾಪಂ ಸಮುದಾಯ ಭವನದಲ್ಲಿ ಪಾಂಬಾರಿನ ಷಣ್ಮುಖ ಫ್ರೆಂಡ್ಸ್ ವತಿಯಿಂದ ರೋಟರಿ-ಕ್ಯಾಂಪ್ಕೊ ಬ್ಲಡ್ ಬ್ಯಾಂಕ್, ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರ, ರಕ್ತದೊತ್ತಡ, ಮಧುಮೇಹ ತಪಾಸಣೆ, ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಷಣ್ಮುಖ ಫ್ರೆಂಡ್ಸ್ ಗೌರವಾಧ್ಯಕ್ಷ ಜಯಪ್ರವೀಣ ಪಾಂಬಾರು ಅಧ್ಯಕ್ಷತೆ ವಹಿಸಿದ್ದರು. ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್., ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಅಮಿತ್ ಕುಮಾರ್ ಟಿ, ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಸಂಘ ನಿರ್ದೇಶಕ ಸತೀಶ್ ಪಾಂಬಾರು, ಷಣ್ಮುಖ ಫ್ರೆಂಡ್ಸ್ ಅಧ್ಯಕ್ಷ ಚಿನ್ನಪ್ಪ ಕೆರೆಮೂಲೆ ಮಾತನಾಡಿದರು.
ಬೆಂಗಳೂರು ಹೈಕೋರ್ಟ್ ವಕೀಲ ಮೋಹಿತ್ ಕುಮಾರ್, ದೈವನರ್ತಕ ರಮೇಶ್ ಅಜಿಲ, ಗಾಯಕ ರವಿ ಪಾಂಬಾರು ಅವರನ್ನು ಸನ್ಮಾನಿಸಲಾಯಿತು. ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರಿಗೆ ಗೌರವಿಸಲಾಯಿತು. ದೀಕ್ಷಿತಾ ಪಿ., ವೀಕ್ಷಾ ಪಿ ಪ್ರಾರ್ಥಿಸಿದರು. ಷಣ್ಮುಖ ಫ್ರೆಂಡ್ಸ್ ಸದಸ್ಯ ಯಕ್ಷಿತ್ ಪಿ ಸ್ವಾಗತಿಸಿದರು. ಸ್ವಾತಿಕ್ ಜೆ.ಪಿ. ವಂದಿಸಿದರು. ಷಣ್ಮುಖ ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಎಂ.ಪಾಂಬಾರು ಕಾರ್ಯಕ್ರಮ ನಿರೂಪಿಸಿದರು. 33 ಯೂನಿಟ್ ರಕ್ತ ಸಂಗ್ರಹಿಸಲಾಯಿತು.