15ರಂದು ರಕ್ತದಾನ ಶಿಬಿರ : ಕೆ.ವಸಂತ ಬಂಗೇರ ಜನ್ಮದಿನದ ಪ್ರಯುಕ್ತ ಕಾರ್ಯಕ್ರಮ

blood camp 1
Published on

ಬೆಳ್ತಂಗಡಿ: ಮಾಜಿ ಶಾಸಕ ದಿವಂಗತ ಕೆ.ವಸಂತ ಬಂಗೇರ ಅವರ 79ನೇ ಜನ್ಮದಿನದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು ಜ.15ರಂದು ಶ್ರೀಗುರುನಾರಾಯಣ ಸ್ವಾಮಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆ.ವಸಂತ ಬಂಗೇರ ಅಭಿಮಾನಿ ಬಳಗದ ಪ್ರಧಾನ ಕಾರ್ಯದರ್ಶಿ ಮನೋಹರ್ ಕುಮಾರ್ ಇಳಂತಿಲ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ವೆನ್ಲಾಕ್ ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ಶಿಬಿರ ನಡೆಯಲಿದ್ದು ಬಂಗೇರ ಅಭಿಮಾನಿಗಳು, ಶ್ರೀ ಗುರುದೇವ ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ರಕ್ತದಾನ ಮಾಡಲಿರುವರು ಎಂದರು.

ವಸಂತ ಬಂಗೇರರ ಕುರಿತು ರಾಣಿ ಅಬ್ಬಕ್ಕ ತುಳು ಅಧ್ಯಯನ ಪೀಠದ ಮುಖ್ಯಸ್ಥ ಡಾ.ತುಕಾರಾಮ ಪುಜಾರಿ ಉಪನ್ಯಾಸ ನೀಡುವರು. ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಗುವುದು. ಸಮಿತಿ ವತಿಯಿಂದ ದಯಾ ವಿಶೇಷ ಶಾಲೆಯ ಮಕ್ಕಳಿಗೆ ಊಟದ ವ್ಯವಸ್ಥೆ ಹಮ್ಮಿಕೊಳ್ಳಲಾಗಿದೆ ಎಂದರು.

ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಮಾಯಿಲತ್ತೋಡಿ, ಕೋಶಾಧಿಕಾರಿ ಶೇಖರ್ ಕುಕ್ಕೇಡಿ, ಉಪಾಧ್ಯಕ್ಷ ಲೋಕೇಶ್ ಗೌಡ, 75ನೇ ಹುಟ್ಟುಹಬ್ಬ ಆಚರಣಾ ಸಮಿತಿಯ ಪ್ರಧಾನ ಸಂಚಾಲಕ ದೇವಿಪ್ರಸಾದ್, ಅಭಿಮಾನಿಗಳಾದ ಲಕ್ಷ್ಮಣ ಗೌಡ, ಯಶೋಧರ ಬಂಗೇರ ಚಾರ್ಮಾಡಿ, ಅಶ್ರಪ್ ನೆರಿಯ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net