

ಎಚ್.ಡಿ.ಕೋಟೆ: ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ವರ್ಷಗಳಾದರೂ ಕಪ್ಪು ಹಣ ದೇಶಕ್ಕೆ ಬರಲಿಲ್ಲ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಟೀಕಿಸಿದರು.
ಪಟ್ಟಣದಲ್ಲಿ ಮಂಗಳವಾರ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಮಾತನಾಡಿದರು. ಬಿಜೆಪಿಯು ಚುನಾವಣೆಗಳಲ್ಲಿ ಸುಳ್ಳು ಆಶ್ವಾಸನೆ ನೀಡುತ್ತಾ ಜನರ ಜತೆ ಚೆಲ್ಲಾಟವಾಡುತ್ತಾ ಬಂದಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಜನ ಸಾಮಾನ್ಯರ ಮೇಲೆ ಬರೆ ಎಳೆಯುತ್ತಿದೆ. ನಮ್ಮ ಪಕ್ಷ ಶ್ರೀಮಂತರಿಂದ ಕಿತ್ತು ಬಡವರಿಗೆ ನೀಡುತ್ತಿತ್ತು. ಆದರೆ, ಬಿಜೆಪಿ ಬಡವರಿಂದ ಕಿತ್ತು ಶ್ರೀಮಂತರಿಗೆ ನೀಡುತ್ತಿದೆ ಎಂದು ಬೇಸರಿಸಿದರು.
ಕೇಂದ್ರ ಸರ್ಕಾರ ಬಡವರ, ರೈತರ ಸಾಲ ಮನ್ನಾ ಮಾಡುವುದನ್ನು ಬಿಟ್ಟು ಶ್ರೀಮಂತರ ಬರೋಬ್ಬರಿ 25 ಲಕ್ಷ ಕೋಟಿ ರೂ. ಹಣವನ್ನು ಮನ್ನಾ ಮಾಡಿದೆ. ಇದರಿಂದಲೇ ಅರ್ಥವಾಗುತ್ತೆ ಇದು ಶ್ರೀಮಂತರ ಪಕ್ಷ ಎಂದು. ಬರ ಪರಿಹಾರಕ್ಕೆ 5,300 ಕೋಟಿ ರೂ., ಬೆಂಗಳೂರಿನ ಕೆರೆ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ., ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಬಿಜೆಪಿ ಆಶ್ವಾಸನೆ ನೀಡಿತ್ತು. ಭರವಸೆಗಳು ಇಂದಿಗೂ ಹಾಗೆಯೇ ಉಳಿದಿವೆ ಎಂದರು.
ಕಾಂಗ್ರೆಸ್ ಸರ್ಕಾರವು 158 ಭರವಸೆಗಳನ್ನು ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದಾಗಲೇ ಈಡೇರಿಸಿದೆ. 5 ಗ್ಯಾರಂಟಿಗಳನ್ನು ನಂಬಿ ಜನ ನಮ್ಮನ್ನು ಗೆಲ್ಲಿಸಿದರು. ಅದೇ ರೀತಿ ನಾವು ನಡೆದುಕೊಂಡು, ನುಡಿದಂತೆ ನಡೆದಿದ್ದೇವೆ. ನಮ್ಮ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತಂದರೆ ಬಡ ಕುಟುಂಬಕ್ಕೆ ವರ್ಷಕ್ಕೆ 1 ಲಕ್ಷ ಹಣ ನೀಡಲಿದ್ದೇವೆ. ಕೃಷಿ ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆ, 25 ಲಕ್ಷದವರೆಗೂ ಆರೋಗ್ಯ ವಿಮೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು. ತಾಲೂಕು ಅಧ್ಯಕ್ಷರಾದ ಏಜಾಜ್ ಪಾಷ್, ಮನುಗನಹಳ್ಳಿ ಮಾದಪ್ಪ, ಎಚ್.ಸಿ.ನರಸಿಂಹಮೂರ್ತಿ, ನರಸೀಪುರ ರವಿ, ಎಚ್.ಸಿ.ಮಂಜುನಾಥ್, ನಂದಿನಿ ಚಂದ್ರಶೇಖರ್, ಸತೀಶ್ ಗೌಡ, ಆಸೀಫ್ ಇಕ್ಬಾಲ್, ಮಧು ಕುಮಾರ್, ನಾಗನಹಳ್ಳಿ ಪ್ರದೀಪ್, ನಜೀರ್ ಅಹಮ್ಮದ್, ಕೃಷ್ಣೇಗೌಡ, ರಾಜೇಗೌಡ, ಪ್ರಕಾಶ್, ಅಶೋಕ್, ಮಂಜು, ದಿನೇಶ್, ಈರೇಗೌಡ, ಮೇಟಿಕುಪ್ಪೆ ಗುರುಸ್ವಾಮಿ, ಸಿದ್ದರಾಮು, ಹೇಮಂತ್, ಕಾವೇರಾ, ಶಿವರಾಜು, ಪುಟ್ಟಬಸವ, ಶಿವಪ್ಪ, ಶಿವರಾಜು, ಅನಿಲ್ ಇದ್ದರು.