

ವಿಜಯವಾಣಿ ಸುದ್ದಿಜಾಲ ಕಾಸರಗೋಡು ದೈವ, ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳು ಆ ಊರಿನ ಸುಭಿಕ್ಷೆಗೆ ಕಾರಣವಾಗುವುದು ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರೆ. ನಾಲ್ಕು ಗ್ರಾಮಗಳ ದೇವರಾದ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮೇ 5ರಿಂದ 12ರ ತನಕ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ಜೀರ್ಣೋದ್ಧಾರ ಕಾರ್ಯಗಳಿಗೆ ನಿಧಿ ಸಂಚಯನ ಮಾಡುವ ‘ಪರ್ವ ಸನ್ನಾಹ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆ ವಹಿಸಿದ್ದರು. ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಬ್ರಹ್ಮಕಲಶೋತ್ಸವದ ಲಾಂಛನ ಬಿಡುಗಡೆಗೊಳಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಶಾಸ್ತ್ರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್.ಸದಾಶಿವ ಭಟ್ ಹರಿನಿಲಯ, ಗೋಪಾಲ ಮಣಿಯಾಣಿ ಗುತ್ತು ಮೊದಲಾದವರು ಉಪಸ್ಥಿತರಿದ್ದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ನಿಧಿಕುಂಭಕ್ಕೆ ಎಡನೀರು ಶ್ರೀಗಳು ಕಾಣಿಕೆಯೊಂದಿಗೆ ಮಂತ್ರಾಕ್ಷತೆ ಸಲ್ಲಿಸಿ ಹರಸಿದರು.ದೇವಸ್ಥಾನ ಆಡಳಿತ ಮೊಕ್ತೇಸರ ತಾರಾನಾಥ ಶೆಟ್ಟಿ ಸ್ವಾಗತಿಸಿದರು. ಸುಧಾಕರ ಕಲ್ಲಗದ್ದೆ ವಂದಿಸಿದರು. ಶತರುದ್ರಾಭಿಷೇಕ, ರುದ್ರ ಪಾರಾಯಣ ಸತ್ಕರ್ಮದ ಶ್ರೇಯಸ್ಸಿಗಾಗಿ, ನಾಲ್ಕೂ ಗ್ರಾಮಗಳ ಭಕ್ತ ಜನತೆಗೆ ಈ ಸತ್ಕರ್ಮವನ್ನು ಯಶಸ್ವಿಯಾಗಿ ಮುನ್ನಡೆಸುವ ಶಕ್ತಿ ಪ್ರಾಪ್ತಿಯಾಗಿಸುವ ನಿಟ್ಟಿನಲ್ಲಿ ಶತರುದ್ರಾಭೀಷೇಕ, ರುದ್ರ ಪಾರಾಯಣ, ಬಲಿವಾಡು ಕೂಟ, ಭಕ್ತರಿಂದ ಭಗವಂತನಿಗೆ ಕಾಣಿಕೆ ಸಮರ್ಪಣೆ ನಡೆಯಿತು.
ದೇವಸ್ಥಾನಗಳು ಭಕ್ತರ ಒಟ್ಟುಗೂಡುವಿಕೆಯ ಕೇಂದ್ರಗಳಾಗಿದ್ದು, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ಜನರ ಸಹಭಾಗಿತ್ವದೊಂದಿಗೆ ನಡೆದಾಗ ಹೆಚ್ಚಿನ ಶಕ್ತಿ ಪ್ರಾಪ್ತಿಯಾಗುವುದು. ಗ್ರಾಮಸ್ಥರ ಒಟ್ಟುಗೂಡುವಿಕೆಯಿಂದ ಬ್ರಹ್ಮಕಲಶೋತ್ಸವ ನಡೆಸುವ ಮೂಲಕ ಶ್ರೀ ಸುಬ್ರಹ್ಮಣ್ಯನ ಕೃಪೆಗೆ ಪಾತ್ರರಾಗಲು ಸಾಧ್ಯ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ