ಜನಸೇವೆ ಮಾಡಲು ಆಶೀರ್ವದಿಸಿ

1712369987270_2
Published on

ತಿ.ನರಸೀಪುರ: ಕಳೆದ 40 ವರ್ಷಗಳಿಂದ ನಮ್ಮ ತಂದೆಗೆ ರಾಜಕೀಯ ಅಧಿಕಾರ ಕೊಟ್ಟ ಕ್ಷೇತ್ರದ ಜನತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ನನ್ನನ್ನೂ ಆಶೀರ್ವದಿಸುವ ಮೂಲಕ ಲೋಕಸಭೆ ಪ್ರವೇಶಿಸಿ ಜನಸೇವೆ ಮಾಡಲು ಅವಕಾಶ ಮಾಡಿಕೊಡುವಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಮನವಿ ಮಾಡಿದರು.


ತಾಲೂಕಿನ ಟಿ.ದೊಡ್ಡಪುರ, ಹೆಮ್ಮಿಗೆ ಹಾಗೂ ತಲಕಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು.


ಕಳೆದ ಮೂರು ವಿಧಾನಸಭೆ ಚುನಾವಣೆಯಲ್ಲಿ ನಾನೂ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಕಾರಣಾಂತರಗಳಿಂದ ಹೈ ಕಮಾಂಡ್ ಟಿಕೆಟ್ ನೀಡಿರಲಿಲ್ಲ. ಆದರೆ ಈ ಬಾರಿ ಪಕ್ಷದ ಹೈಕಮಾಂಡ್ ವಿಧಾನಸಭೆಗಿಂತ ಹೆಚ್ಚಿನ ಜವಾಬ್ದಾರಿ ಹೊಂದಿರುವ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನನ್ನ ಮೇಲೆ ನಂಬಿಕೆ ಇಟ್ಟು ಬಹು ದೊಡ್ಡ ಜವಾಬ್ದಾರಿ ಹೊರಿಸಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳ ಬೇಕಾದರೆ ಕ್ಷೇತ್ರದ ಜನರು ಹೆಚ್ಚಿನ ರೀತಿಯ ಸಹಕಾರ ನೀಡಬೇಕಿದೆ. ನನಗೆ ರಾಜಕೀಯ, ಅಧಿಕಾರ ಇಲ್ಲದ ವೇಳೆಯೂ ನನ್ನ ಮೇಲೆ ಪ್ರೀತಿ, ವಿಶ್ವಾಸ ತೋರಿ ಮನೆ ಮಗನಂತೆ ನೋಡಿಕೊಂಡಿದ್ದೀರಿ. ನಮ್ಮ ತಂದೆ ಚುನಾವಣೆಗೆ ನಿಂತ ವೇಳೆ ವಿಧಾನಸಭಾ ಚುನಾವಣೆಯಲ್ಲಿ 13 ಸಾವಿರ ಮತಗಳ ಲೀಡ್ ಕೊಟ್ಟು ಗೆಲ್ಲಿಸಿ ಮಂತ್ರಿ ಮಾಡಿರುವ ನೀವು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತ್ತಷ್ಟು ಹೆಚ್ವಿನ ಮತಗಳನ್ನು ನೀಡಿ ಜಯ ತಂದುಕೊಡಬೇಕು. ಆ ಮೂಲಕ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳಾಗಲು ನೀವೆಲ್ಲರೂ ಮುನ್ನುಡಿಯಾಗಬೇಕು ಎಂದರು.


ಗ್ಯಾರಂಟಿ ಯೋಜನೆಗಳ ಮುಂದಿಟ್ಟು ಮತ ಕೇಳಿ: ಕಾಂಗ್ರೆಸ್ ನುಡಿದಂತೆ ನಡೆದ ಸರ್ಕಾರವಾಗಿದೆ. ರಾಜ್ಯ ಸರ್ಕಾರದ ಸಂಪುಟ ಸದಸ್ಯರೆಲ್ಲರೂ ಸೇರಿ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ್ದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ. ಲೋಕಸಭೆ ಚುನಾವಣೆಗೆ ಸಮಯ ಬಹಳ ಕಡಿಮೆ ಇದೆ. ಹಾಗಾಗಿ ಮನೆ ಮನೆಗೆ ಹೋಗಿ ಮತ ಕೇಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಮತಯಾಚನೆ ಮಾಡುತ್ತೇನೆ. ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿಗಳನ್ನು ಧೈರ್ಯವಾಗಿ ಮತದಾರರಿಗೆ ಮನವರಿಕೆ ಮಾಡಿ ಹೆಚ್ಚಿನ ಮತ ಸೆಳೆಯಲು ಮುಂದಾಗಬೇಕು. ಕಾರ್ಯಕರ್ತರು ಮೈ ಮರೆಯದೆ ನೀವೇ ಅಭ್ಯರ್ಥಿ ಎಂದು ತಿಳಿದು ಮತಯಾಚನೆ ಮಾಡಿ ಎಂದು ಮನವಿ ಮಾಡಿದರು.


ಬಿಜೆಪಿ ಯಾವುದೇ ಭರವಸೆ ಈಡೇರಿಸಿಲ್ಲ: ಬಿಜೆಪಿ ಜನತೆಗೆ ಕೊಟ್ಟ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಬಿಜೆಪಿ ಬಡವರನ್ನು ಬಡವರಾಗೇ ಇಟ್ಟು ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿ ಅವರಿಗೆ ಅನುಕೂಲ ಕಲ್ಪಿಸಿಕೊಟ್ಟಿದೆ. ದೇಶಕ್ಕಾಗಲಿ, ರಾಜ್ಯಕ್ಕಾಗಲಿ ಅವರ ಕೊಡುಗೆ ಶೂನ್ಯವಾಗಿದ್ದು, ಈಗ ಮತ್ತೆ 5 ವರ್ಷ ಅಧಿಕಾರ ನೀಡುವಂತೆ ಸುಳ್ಳು ಭರವಸೆ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲು ಮುಂದಾಗಿದ್ದಾರೆ. ಅವರು ಏನೇ ತಂತ್ರಗಾರಿಕೆ ಮಾಡಿದರೂ ಕ್ಷೇತ್ರದ ಜನತೆ ಅವರಿಗೆ ಮಣೆ ಹಾಕದೆ ಕಾಂಗ್ರೆಸ್ ಕೈ ಹಿಡಿಯುತ್ತಾರೆಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಬಸವರಾಜು, ನಿಕಟಪೂರ್ವ ಅಧ್ಯಕ್ಷ ಟಿ.ಎಚ್.ಮಂಜುನಾಥ್, ಹೆಮ್ಮಿಗೆ ಡೈರಿ ಅಧ್ಯಕ್ಷ ಶೇಷಾದ್ರಿ, ಕಾರ್ಯದರ್ಶಿ ಸೋಮಣ್ಣ, ದೊಡ್ಡನಹುಂಡಿ ನಂಜುಂಡಸ್ವಾಮಿ, ಜಾಲಹಳ್ಳಿ ಸುರೇಶ್, ತೊಟ್ಟವಾಡಿ ಚಂದ್ರು, ಕುಕ್ಕೂರು ಗಣೇಶ್, ಹಿರಿಯೂರು ನವೀನ್, ಮಲ್ಲಿಕಾರ್ಜುನ, ತಲಕಾಡು ಸುಂದರನಾಯಕ, ದೊಡ್ಡಪುರ ಚಂದ್ರು, ಲಕ್ಷ್ಮೀನಾರಾಯಣ, ಆಪ್ತ ಸಹಾಯಕ ಬಸವರಾಜು, ಅಕ್ಕೂರು ಗುರುಮೂರ್ತಿ, ಸೋಸಲೆ ಪರಶಿವ ಮೂರ್ತಿ, ನಿಲಸೋಗೆ ಮಹದೇವ ಪ್ರಸಾದ್, ಕಟ್ಟೇಪುರ ಮಹಾದೇವಸ್ವಾಮಿ, ಸಿ.ಬಿ.ಹುಂಡಿ ನಂಜುಂಡಸ್ವಾಮಿ, ಪಾರುಪತ್ತೆದಾರ್ ಎಂ.ಬಿ.ಸಾಗರ್, ಯಜಮಾನ್ ಚಿನ್ನಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net