ಕೆಮಿಕಲ್​ ಮಿಕ್ಸಿಂಗ್ ವೇಳೆ ಸ್ಫೋಟ; ಐವರು ಕಾರ್ಮಿಕರಿಗೆ ಗಾಯ, ಮೂವರ ಪರಿಸ್ಥಿತಿ ಗಂಭೀರ..

Untitled-1
Published on

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮತ್ತೊಂದು ಆಕಸ್ಮಿಕ ಸ್ಫೋಟ ಸಂಭವಿಸಿದ್ದು, ಐವರು ಕಾರ್ಮಿಕರು ಗಾಯಗೊಂಡಿದ್ದಾರೆ. ಆ ಪೈಕಿ ಮೂವರ ಪರಿಸ್ಥಿತಿ ಗಂಭೀರವಾಗಿದೆ. ಪ್ರಿಕಾಟ್​ ಲಿಮಿಟೆಡ್​ ಎಂಬ ರಾಸಾಯನಿಕ ಕಂಪನಿಯಲ್ಲಿ ಈ ಅವಘಡ ಸಂಭವಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿಕ್ಕಕುರಗೋಡು ಗ್ರಾಮದ ವಿದುರಾಶ್ವತ್ಥ ಕೈಗಾರಿಕಾ ಪ್ರದೇಶದಲ್ಲಿರುವ ಪ್ರಿಕಾಟ್​ ಲಿಮಿಟೆಡ್​ ಕೆಮಿಕಲ್​ ಕಂಪನಿಯ ಕೆ-ಯುನಿಟ್​ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಕಾರ್ಮಿಕರು ಸೋಡಿಯಂ ಹೈಡ್ರಾಕ್ಸೈಡ್​ ಮಿಶ್ರಣ ಮಾಡುವ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿದೆ.

ಈ ಸ್ಫೋಟದಲ್ಲಿ ಕಾರ್ಮಿಕರಾದ ಹರೀಶ್, ವೆಂಕಟೇಶ್, ರವಿಕುಮಾರ್, ಆನಂದಕುಮಾರ್, ಗೊರವಯ್ಯ ಗಾಯಗೊಂಡಿದ್ದಾರೆ. ಐವರಿಗೆ ಗೌರಿಬಿದನೂರು ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ ವೆಂಕಟೇಶ್​, ರವಿಕುಮಾರ್, ಗೊರವಯ್ಯ ಅವರ ಪರಿಸ್ಥಿತಿ ಗಂಭೀರವಾಗಿದ್ದು ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net