ಬಸ್‌ಸ್ಟ್ಯಾಂಡ್ ನಲ್ಲಿ ಧರ್ಮ ನಿಂದನೆ ಭಿತ್ತಿಪತ್ರ : ಪುಳಿತ್ತಡಿಯಲ್ಲಿ ಕಿಡಿಗೇಡಿ ಕೃತ್ಯ

Published on

ಪುತ್ತೂರು ಗ್ರಾಮಾಂತರ: ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪುಳಿತ್ತಡಿ ಎಂಬಲ್ಲಿ ಪ್ರಯಾಣಿಕರ ಬಸ್ ತಂಗುದಾಣದ ಗೋಡೆಯಲ್ಲಿ ಎರಡು ಬಿಳಿ ಹಾಳೆಗಳಲ್ಲಿ ಪ್ರವಾದಿ ಪೈಗಂಬರ್ ಮತ್ತು ಮುಸ್ಲಿಮರ ಕುರಿತು ಅವಹೇಳನಕಾರಿ ಬರಹಗಳನ್ನು ಬರೆದು ಅಂಟಿಸಿರುವುದು ವಿವಾದ ಸೃಷ್ಟಿಸಿತು.

ಒಂದು ಬಿಳಿಹಾಳೆಯಲ್ಲಿ ಪ್ರವಾದಿ ಪೈಗಂಬರ ಮತ್ತು ಮುಸ್ಲಿಮರ ಬಗ್ಗೆ ಅಹೇಳನಕಾರಿಯಾಗಿ ಬರೆಯಲಾಗಿದ್ದು, ಮತ್ತೊಂದು ಹಾಳೆಯಲ್ಲಿ ಅಶ್ಲೀಲವಾಗಿ ಬಿಡಿಸಿದ ಚಿತ್ರದ ಜತೆಗೆ ಕೆಟ್ಟ ಶಬ್ದದಲ್ಲಿ ಬರೆಯಲಾಗಿದೆ. ಈ ವಿಚಾರ ತಿಳಿದ ಬೆನ್ನಲ್ಲೇ ಈಶ್ವರಮಂಗಲ ಹೊರ ಠಾಣೆಯ ಪೊಲೀಸರು ಅಲ್ಲಿಗೆ ತೆರಳಿ ಅವಹೇಳನಕಾರಿ ಬರಹಗಳಿದ್ದ ಚೀಟಿಯನ್ನು ತೆರವುಗೊಳಿಸಿದರು.

ವಿವಿಧ ಮುಸ್ಲಿಂ ಸಂಘಟನೆಗಳ ಪ್ರಮುಖರು ಈಶ್ವರಮಂಗಲ ಹೊರ ಠಾಣೆಗೆ ಮತ್ತು ಸಂಪ್ಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅವಹೇಳನಕಾರಿ ಬರಹ ಘಟನೆಗೆ ಸಂಬಂಧಿಸಿ ಎಸ್‌ಡಿಪಿಐ ನೆಟ್ಟಣಿಗೆ ಮುಡ್ನೂರು ಘಟಕದ ಅಧ್ಯಕ್ಷ ಪಾರೂಕ್ ಟಿ.ಎ.ನೀಡಿರುವ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಮಾಡಿ ಬಂಧಿಸುವುದಾಗಿ ಸಂಪ್ಯ ಠಾಣೆಯ ಎಸ್‌ಐ ಅವರು ಭರವಸೆ ನೀಡಿದ್ದಾರೆ ಎಂದು ಸ್ಥಳೀಯ ಮುಸ್ಲಿಂ ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net