ಕಲ್ಲು ತೂರಿದ ಮದ್ಯಪಾನಿ ರೈಲು ಪ್ರಯಾಣಿಕ ಗಂಭೀರ

harassment
Published on

ಕಾಸರಗೋಡು: ಸಹಪ್ರಯಾಣಿಕರಿಗೆ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ರೈಲಿನಿಂದ ಕೆಳಗಿಳಿಸಿದ ಸಿಟ್ಟಿನಲ್ಲಿ ಮದ್ಯಪಾನಿಯೊಬ್ಬ ರೈಲಿಗೆ ಕಲ್ಲು ತೂರಾಟ ನಡೆಸಿದ ಪರಿಣಾಮ ಪ್ರಯಾಣಿಕರೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಕೊಲ್ಲಂ ಶಕ್ತಿಕುಳಂಗರ ನಿವಾಸಿ ಮುರಳಿ(62)ಗಾಯಾಳು. ಅವರನ್ನು ನೀಲೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಞಂಗಾಡಿನಲ್ಲಿ ಘಟನೆ ನಡೆದಿದೆ. ವೆಸ್ಟ್‌ಕೋಸ್ಟ್ ರೈಲು ಕಾಸರಗೋಡು ನಿಲ್ದಾಣದಿಂದ ಹೊರಟ ಅಲ್ಪ ಹೊತ್ತಿನಲ್ಲಿ ಮದ್ಯಪಾನಿ ದಾಂಧಲೆ ಆರಂಭಿಸಿದ್ದನು. ಇದನ್ನು ಪ್ರಶ್ನಿಸಿದ ಸಹಪ್ರಯಾಣಿಕರ ಮೇಲೂ ರೇಗಾಟ ಆರಂಭಿಸಿದ್ದನು. ಇದರಿಂದ ಬೇಸತ್ತ ಪ್ರಯಾಣಿಕರು ಈತನನ್ನು ಬಲವಂತವಾಗಿ ಕಾಞಂಗಾಡು ನಿಲ್ದಾಣದಲ್ಲಿ ಇಳಿಸಿದ್ದರು. ಇದರಿಂದ ಸಿಟ್ಟುಗೊಂಡ ಆರೋಪಿ, ಸಂಚಾರ ಆರಂಭಿಸಿದ ರೈಲಿಗೆ ಬಲವಾಗಿ ಕಲ್ಲು ತೂರಾಟ ನಡೆಸಿದ್ದಾನೆ. ಇದು ಕಿಟಕಿ ಬದಿ ಕುಳಿತಿದ್ದ ಮುರಳಿ ಅವರ ತಲೆಗೆ ತಗುಲಿ ಗಂಭೀರ ಗಾಯಗಳುಂಟಾಗಿತ್ತು. ರೈಲು ನೀಲೇಶ್ವರ ತಲುಪುತ್ತಿದ್ದಂತೆ ಗಾಯಾಳುವನ್ನು ಇಳಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಕ್ರಮ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net