

ತುಮಕೂರು: ಹೇಮಾವತಿ ಎಕ್ಸ್ ಪ್ರೆಸ್ ಕೇನಾಲ್ ಕಾಮಗಾರಿಯನ್ನು ತತ್ಕ್ಷಣ ಸ್ಥಗಿತಗೊಳಿಸುವುದು ಸೇರಿದಂತೆ ಜಿಲ್ಲೆಗೆ ನಿಗಧಿಯಾಗಿರುವ ನೀರನ್ನು ಸಂಪೂರ್ಣ ಪ್ರಮಾಣದಲ್ಲಿ ಹರಿಸುವಂತೆ ಆಗ್ರಹಿಸಿ ಡಿ.7 ರಂದು ಸಂಯುಕ್ತ ಕಿಸಾನ್ ಕರ್ನಾಟಕ ನೇತೃತ್ವದಲ್ಲಿ ವಿವಿಧ ರೈತಪರ ಸಂಘಟನೆಗಳು ಕಪ್ಪುಪಟ್ಟಿ ಧರಿಸಿ,ಬೃಹತ್ ಪ್ರತಿಭಟನಾ ಧರಣಿಯನ್ನು ನಗರದಲ್ಲಿ ಹಮ್ಮಿಕೊಂಡಿವೆ.
ತುಮಕೂರು ಶಾಖಾ ನಾಲೆಯಿಂದ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಏಕಾಏಕಿ ಆರಂಭಿಸಿ ಜಿಲ್ಲೆಯ ಜನರಲ್ಲಿ, ಮುಖ್ಯವಾಗಿ ರೈತರಿಗೆ ತೀವ್ರವಾದ ಆತಂಕವನ್ನು ಸರ್ಕಾರ ಸೃಷ್ಟಿಸಿದೆ. ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳ ರೈತರು ಹಾಗೂ ನಾಗರಿಕರು ಕುಡಿಯುವ ನೀರಿಗೆ ಹೇಮಾವತಿ ನೀರನ್ನು ಅವಲಂಬಿಸಿದ್ದಾರೆ. ಹೇಮಾವತಿ ನೀರನ್ನು ನೆಚ್ಚಿಕೊಂಡೇ ಕೃಷಿ ಮತ್ತು ಬದುಕನ್ನು ರೂಪಿಸಿಕೊಂಡಿದ್ದಾರೆ. ಹಾಗಾಗಿ, ನೈಸರ್ಗಿಕವಾಗಿ ಹೇಮೆ ನೀರನ್ನು ಮಾಗಡಿ ತೆಗೆದುಕೊಂಡು ಹೋಗಲು ಯಾರ ಅಭ್ಯಂತರ ಇಲ್ಲ. ಆದರೆ, ಎಕ್ಸ್ಪ್ರೆಸ್ ಕೆನಾಲ್ನಲ್ಲಿ ನೀರು ಹರಿಸಿದರೆ ತೀವ್ರವಾದ ಕೃಷಿ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂದು ಸಿ.ಯತಿರಾಜು ಕಳವಳ ವ್ಯಕ್ತಪಡಿಸಿದರು.
ತುಮಕೂರು ನಾಲಾ ವಲಯಕ್ಕೆ ಹಂಚಿಕೆಯಾಗಿರುವ 24.5 ಟಿಎಂಸಿ ನೀರು ದೊರಕಿಲ್ಲ. ಹಾಗಾದರೆ, 25.31 ಟಿಎಂಸಿ ನೀರು ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಮೊದಲು ಜಿಲ್ಲೆಗೆ ಬರಬೇಕಾದ ನೀರಿನ ಹಂಚಿಕೆಯನ್ನು ಖಚಿತಪಡಿಸಬೇಕು. ಲಿಂಕ್ ಕೆನಾಲ್ನಿಂದ ನಿಮಾರ್ಣದಿಂದಾಗಿ ಜಿಲ್ಲೆಗೆ ಬರುವ ಅಲ್ಪಸ್ವಲ್ಪ ನೀರು ಭಾಗವಾಗಿ ಮಾಗಡಿಗೆ ಹರಿದು ಹೋಗಬಹುದೆಂದು ಆತಂಕ ಇದೆ. ಈ ವಿಚಾರದಲ್ಲಿ ಸರ್ಕಾರವು ರೈತ ಮುಖಂಡರೊಂದಿಗೆ ಚರ್ಚೆ ನಡೆಸಿ, ಅನುಮಾನವನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.
ಲಿಂಕ್ ಕೆನಾಲ್ನಿಂದ ಅಂತಿಮವಾಗಿ ಇದರ ಹೊರೆ ಜನರ ಮೇಲೇ ಬೀಳುತ್ತದೆ. ನೀರಿನ ಹಂಚಿಕೆ ಬಹಳ ಸೂಕ್ಷ್ಮ ವಿಷಯ ಜನರ ಬದುಕೇ ಪಣವಾಗಿರುತ್ತದೆ. ಅಂತಹ ವಿಷಯದಲ್ಲಿ ಸರ್ಕಾರ ಕೇವಲ ಆಡಳಿತಾತ್ಮಕ ನಿರ್ಧಾರ ತೆಗೆದುಕೊಂಡು ಜಿಲ್ಲೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿದೆ. ಜತೆಗೆ ತುಮಕೂರು ಮತ್ತು ರಾಮನಗರ ಜಿಲ್ಲೆಯ ಜನರನ್ನು ಪರಸ್ಪರ ವಿರೋಧಿಗಳಂತೆ ಚಿತ್ರಿಸುವ ಅಪಾಯವೂ ಇದೆ. ಪೈಪ್ಲೇನ್ ಜೋಡಣೆ ನಡೆಯುತ್ತಿರುವುದು ಸಂಘರ್ಷವೇರ್ಪಡುವ ಸಂಭವವಿದೆ. ಇಂತಹ ಸೂಕ್ತವಾದ, ಭಾವನಾತ್ಮಕವಾದ ಬದುಕಿನ ಪ್ರಶ್ನೆಯೊಂದಿಗೆ ಬೆರೆತಿರುವ ವಿಷಯವನ್ನು ಮತ ರಾಜಕೀಯಕ್ಕಾಗಿ ಬಳಸಿಕೊಳ್ಳುವುದು ಅಕ್ಷಮ್ಯ ಎಂದು ರಾಜ್ಯ ರೈತ ಸಂದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಹೇಳಿದರು.
ಹೇಮಾವತಿ ನೀರಿನ ಹಂಚಿಕೆಯಲ್ಲಿ ಅನ್ಯಾಯವಾಗುವ ಅವೈಜ್ಞಾನಿಕ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕೆಲಸವನ್ನು ನಿಲ್ಲಿಸಬೇಕು. ಪರಿಸ್ಥಿತಿ ಕೈಮೀರದಂತೆ ನೋಡಬೇಕು ಎಂದು ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಡಿ. 7 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿಯನ್ನು ನಡೆಸುತ್ತಿದೆ. ಅಂದು ಬೆಳಗ್ಗೆ 11ಕ್ಕೆ ನಡೆಯುವ ಧರಣಿಗೆ ಜಿಲ್ಲೆಯ ಎಲ್ಲಾ ನಾಗರಿಕರು, ಮುಖ್ಯವಾಗಿ ರೈತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಟಿ ಯಲ್ಲಿ ಎಕೆಐಎಸ್ನ ಎಸ್.ಎನ್.ಸ್ವಾಮಿ, ಪ್ರಾಂತ ರೈತ ಸಂಘದ ಬಿ.ಉಮೇಶ್, ಚನ್ನಬಸವಣ್ಣ, ಅಜ್ಜಪ್ಪ, ಎಐಕೆಎಸ್ ಕಂಬೇಗೌಡ , ವೆಂಕಟೇಗೌಡ, ಮಹಿಳಾ ವಿಭಾಗದ ಜಯಮ್ಮ ಮತ್ತಿತರರು ಹಾಜರಿದ್ದರು.