ಕಪ್ಪುತಲೆ ಹುಳ ನಿಯಂತ್ರಣ ಪ್ರಾತ್ಯಕ್ಷಿಕೆ

tengu
ತೆಂಗಿನ ಗರಿ ತಿನ್ನುವ ಕಪ್ಪುತಲೆ ಹುಳ ನಿಯಂತ್ರಣದ ಕುರಿತಂತೆ ರೈತರಿಗೆ ಪ್ರಾತ್ಯಕ್ಷಿಕೆ, ಮಾಹಿತಿ ನೀಡುವ ಕ್ಷೇತ್ರೋತ್ಸವ ಕಾರ‌್ಯಕ್ರಮ ಹಾಗೂ ಮತದಾನ ಜಾಗೃತಿ ಅಭಿಯಾನ ಕನ್ನಡಕುದ್ರುವಿನ ಬೊನ್ಪಿ ರೆಬೆಲ್ಲೋ ಅವರ ತೆಂಗಿನ ತೋಟದಲ್ಲಿ ನಡೆಯಿತು.
Published on

ಗಂಗೊಳ್ಳಿ: ಕನ್ನಡಕುದ್ರು, ಮೂವತ್ತುಮುಡಿ ಪರಿಸರದಲ್ಲಿ ತೆಂಗಿನಗರಿ ತಿನ್ನುವ ಕಪ್ಪುತಲೆ ಹುಳ ನಿಯಂತ್ರಣ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ, ಮಾಹಿತಿ ನೀಡುವ ಕ್ಷೇತ್ರೋತ್ಸವ ಕಾರ್ಯಕ್ರಮ ಹಾಗೂ ಮತದಾನ ಜಾಗೃತಿ ಅಭಿಯಾನ ಕನ್ನಡಕುದ್ರುವಿನ ಬೊನ್ಪಿ ರೆಬೆಲ್ಲೋ ತೆಂಗಿನ ತೋಟದಲ್ಲಿ ಇತ್ತೀಚೆಗೆ ನಡೆಯಿತು.

ತೋಟಗಾರಿಕೆ ಇಲಾಖೆ ಕುಂದಾಪುರ, ವಲಯ ಕೃಷಿ ಮತ್ತು ಬ್ರಹ್ಮಾವರ ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ 2023-24ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಗರಿ ತಿನ್ನುವ ಹುಳುವಿನ ನಿಯಂತ್ರಣದ ಬಗ್ಗೆ, ಬೆಳಕಿನ ಆಕರ್ಷಕ ಬಲೆಯ ತಾಂತ್ರಿಕತೆ ಅಳವಡಿಸುವ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಕೀಟಶಾಸ್ತ್ರದ ಸಹ ಪ್ರಾಧ್ಯಾಪಕ ಡಾ.ರೇವಣ್ಣ ರೇವಣ್ಣನವರ್ ಗರಿ ತಿನ್ನುವ ಹುಳ ನಿಯಂತ್ರಣದ ಕುರಿತು ಮಾಹಿತಿ ನೀಡಿದರು.

ಕುಂದಾಪುರದ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ನಿಧೀಶ ಕೆ.ಜೆ. ಮಾತನಾಡಿ, ಈ ಹುಳವನ್ನು ನಿಯಂತ್ರಿಸಬೇಕಾದರೆ ತೆಂಗಿನ ಮರಗಳನ್ನು ಚೆನ್ನಾಗಿ ಆರೈಕೆ ಮಾಡಬೇಕು. ಆದರೆ ಈಗ ನೀರಿನ ತೆಂಗಿನ ಮರಗಳಿಗೆ ನೀರಿನ ಸಮಸ್ಯೆ ಇರುವುದರಿಂದ ಗೊಬ್ಬರ ಹಾಕಿ, ನೀರು ಕೊಟ್ಟು ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಈ ಬೆಳಕಿನ ಆಕರ್ಷಕ ಬಲೆಯ ಮೂಲಕ ನಿಯಂತ್ರಣಕ್ಕೆ ಪ್ರಯತ್ನಿಸಿದ್ದೇವೆ ಎಂದರು.

ಪ್ರಗತಿಪರ ಕೃಷಿಕರಾದ ಬೊನ್ಪಿ ರೆಬೆಲ್ಲೋ, ಜೆಮ್ಮಿ ಕ್ರಾಸ್ತ, ಸ್ಥಳೀಯ ಕೃಷಿಕರು, ಊರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರೈತ ಚಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸ್ಟೀವನ್ ಒಲಿವೇರಾ ಮಾತನಾಡಿದರು. ಸಹಾಯಕ ತೋಟಗಾರಿಕಾ ಅಧಿಕಾರಿ ಪ್ರವೀಣ್ ಸ್ವಾಗತಿಸಿದರು.

ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮದಲ್ಲಿ ಸೇರಿದ್ದ ಕನ್ನಡಕುದ್ರು, ಮೂವತ್ತುಮುಡಿ ಪರಿಸರದ ರೈತರಿಗೆ, ಊರವರಿಗೆ ಕುಂದಾಪುರ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಎಲ್ಲರೂ ಕಡ್ಡಾಯವಾಗಿ, ತಪ್ಪದೇ ಮತದಾನ ಮಾಡಬೇಕು ಎಂದು ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ನೇತೃತ್ವದಲ್ಲಿ ಮಾಹಿತಿ ನೀಡಲಾಯಿತು. ಕಡ್ಡಾಯ ಮತದಾನದ ಕುರಿತಂತೆ ನೆರೆದಿದ್ದ ಜನರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net