More

    ಕೆರೆ ಅಭಿವೃದ್ಧಿ ಮರೀಚಿಕೆ: ನಾಗರಬಾವಿ ಕಾಯಕಲ್ಪಕ್ಕೆ ಅಧಿಕಾರಿಗಳ ನಿರ್ಲಕ್ಷ: ಸಂಘ, ಸಂಸ್ಥೆಗಳಿಂದ ಸ್ವಚ್ಛತೆ

    ಹರಿಪ್ರಸಾದ್ ನಂದಳಿಕೆ ಕಾರ್ಕಳ

    ಅಂತರ್ಜಲವೃದ್ಧಿಗೆ ಪ್ರಮುಖ ಆಧಾರವೇ ಕೆರೆಗಳು. ಆದರೆ ಕಾರ್ಕಳ ಹೃದಯಭಾಗದಲ್ಲಿರುವ ಸರ್ಕಾರಿ ಕೆರೆಯೊಂದು ನಿರ್ಲಕ್ಷದಿಂದ ಪುನಶ್ಚೇತನಗೊಳ್ಳದೆ ಅನಾಥವಾಗಿದೆ.

    ಕಾರ್ಕಳ ನಗರದ ಪುರಸಭೆ ವ್ಯಾಪ್ತಿಯ ಅನಂತಶಯನ ಬಳಿ ವಿಸ್ತಾರವಾಗಿ ಹರಡಿಕೊಂಡಿರುವ ನಾಗರಬಾವಿ ಕೆರೆ ಸರ್ಕಾರದ ಅಧೀನದಲ್ಲಿದ್ದು, ಸುಮಾರು ನೂರಕ್ಕೂ ಅಧಿಕ ವರ್ಷ ಇತಿಹಾಸವಿದೆ. ಇಲ್ಲಿ ನೀರು ಯಥೇಚ್ಛ ಸಂಗ್ರಹವಾಗುವುದರಿಂದ ಅಂತರ್ಜಲ ಹೆಚ್ಚಳಗೊಂಡು ಸುತ್ತಮುತ್ತಲಿನ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಗೂ ಕಾರಣವಾಗುತ್ತದೆ. ಆದರೆ ಈ ಕೆರೆಯ ಅಭಿವೃದ್ದಿ ಕಾರ್ಯ ನಡೆಯದೆ ಹಲವು ವರ್ಷಗಳೇ ಕಳೆದಿದ್ದು, ಸಮರ್ಪಕ ನಿರ್ವಹಣೆಯಾದರೆ ಗ್ರಾಮದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ.

    ಅಧಿಕಾರಿಗಳ ಬೇಜವಾಬ್ದಾರಿ

    ಕಾರ್ಕಳ ಪುರಸಭೆ ವ್ಯಾಪ್ತಿಯ ನಗರ ಕೇಂದ್ರೀಕೃತವಾದ ಈ ಕೆರೆಗೆ ಸೂಕ್ತ ಕಾಯಕಲ್ಪ ಸಿಗದೆ ವರ್ಷಗಳೇ ಕಳೆದಿದ್ದು, ನಿರ್ವಹಣೆಯೂ ಸರಿಯಾಗಿಲ್ಲ. ಸದ್ಯ ಈ ಕೆರೆಯ ನೀರು ಯಾವುದಕ್ಕೂ ಬಳಕೆ ಮಾಡಲು ಸಾಧ್ಯವಿಲ್ಲದಷ್ಟು ಮಲಿನವಾಗಿದ್ದು, ಸಂಬಂಧಿಸಿದ ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಂತಿದೆ.
    ಸ್ಥಳೀಯ ಸಂಘ, ಸಂಸ್ಥೆಗಳು ಒಗ್ಗೂಡಿ ಈ ಕೆರೆಯನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಾ ಬಂದಿದ್ದು, ಊರಿನ ಹಲವರು ಆರ್ಥಿಕ ನೆರವು ಒದಗಿಸುತ್ತಿದ್ದಾರೆ. ಆದರೆ ಈ ಕೆರೆಯು ಶಾಶ್ವತವಾಗಿ ಅಭಿವೃದ್ಧಿಯಾಗಬೇಕೆಂಬ ಊರಿನವರ ಆಶಯ ಮಾತ್ರ ಈವರೆಗೆ ಮರೀಚಿಕೆಯಾಗಿ ಉಳಿದಿದೆ.

    ರೋಟರಿ ಸಂಸ್ಥೆ ವತಿಯಿಂದಲೂ ಕೆರೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸುವ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಅನುದಾನವೂ ಬರಲಿಲ್ಲ, ಕೆರೆಯ ಸ್ಥಿತಿಯೂ ಬದಲಾಗಿಲ್ಲ. ಆದರೂ ರೋಟರಿ ಸಂಸ್ಥೆ ಕೆರೆಯ ಅಭಿವೃದ್ಧಿಗೆ ಪ್ರಯತ್ನಿಸುತ್ತಲೇ ಇದ್ದು, 50 ಸಾವಿರ ರೂ. ವೆಚ್ಚದಲ್ಲಿ ಕೆರೆಯನ್ನು ಸ್ವಚ್ಛಗೊಳಿಸುವ ಪ್ರಯತ್ನವನ್ನೂ ನಡೆಸಿತ್ತು.

    ದೈವಿಕ ಸ್ಪರ್ಶವಿರುವ ಕೆರೆ

    ಕೆರೆಯ ತಟದಲ್ಲಿ ನಾಗನಕಟ್ಟೆ ಇದ್ದು, ದೈವಿಕ ಶಕ್ತಿಯಿದೆ. ಈ ನಾಗನಕಟ್ಟೆ ಕಾರಣದಿಂದ ಕೆರೆಗೆ ನಾಗರಬಾವಿ ಹೆಸರು ಬಂದಿದೆ ಎಂಬುದು ಪ್ರತೀತಿ. ಪುರಾತನ ಕೆರೆಗಳನ್ನು ರಕ್ಷಿಸಿ ಮುಂದಿನ ಜನಾಂಗಕ್ಕೆ ಪರಿಚಯಿಸುವ ದೃಷ್ಟಿಯಿಂದ ಕೆರೆಯ ಅಭಿವೃದ್ಧಿ ಆಗಲೇಬೇಕಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಇದರ ಅಭಿವೃದ್ಧಿಯತ್ತ ಗಮನ ಹರಿಸಬೇಕೆಂಬುದು ಊರವರ ಒತ್ತಾಯ.

    ಖಾಸಗಿ ಅಥವಾ ಸರ್ಕಾರದ ನೆರವಿನಿಂದ ಕೆರೆ ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ನಡೆಸುತ್ತೇವೆ. ರೋಟರಿ ಸಂಸ್ಥೆ ಪುನಶ್ಚೇತನಕ್ಕೆ ಮುಂದೆ ಬಂದಿತ್ತು. ಪುರಸಭೆಗೆ ಮನವಿ ಕೂಡ ಸಲ್ಲಿಸಿದ್ದರು. ಆದರೆ ಅವರು ಮುಂದಿಟ್ಟ ಕೆಲವೊಂದು ಮಾನದಂಡ ಅನುಸರಿಸುವಲ್ಲಿ ಪುರಸಭೆಗೆ ತಾಂತ್ರಿಕ ತೊಂದರೆ ಎದುರಾದ್ದರಿಂದ ಖಾಸಗಿ ಮಾನದಂಡಗಳಿಗೆ ಒಪ್ಪಲು ಸಾಧ್ಯವಾಗಿಲ್ಲ.

    -ರೂಪಾ ಟಿ.ಶೆಟ್ಟಿ, ಮುಖ್ಯಾಧಿಕಾರಿ ಕಾರ್ಕಳ ಪುರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts