

ಬೆಂಗಳೂರು: ನಿನ್ನೆಯಷ್ಟೇ ಜಮ್ಮು-ಕಾಶ್ಮೀರದ ಗಡಿಪ್ರದೇಶದಲ್ಲಿ ನಡೆದಿದ್ದ ಭಯೋತ್ಪಾದಕ ಚಟುವಟಿಕೆ ದೇಶದಲ್ಲಿ ಒಂದು ರೀತಿಯ ಆತಂಕ ಹುಟ್ಟಿಸಿದ್ದರೆ, ಇಂದು ರಾಜಧಾನಿ ಬೆಂಗಳೂರಿನಲ್ಲಿ ವಾರಸುದಾರರಿಲ್ಲದೆ ಕಂಡುಬಂದ ಕಪ್ಪು ಸೂಟ್ಕೇಸ್ ಸಾರ್ವಜನಿಕರಲ್ಲಿ ಕೆಲಕಾಲ ಭಯ ಮೂಡಿಸಿತ್ತು.
ಮಲ್ಲೇಶ್ವರದ 18ನೇ ಅಡ್ಡರಸ್ತೆ ಸಮೀಪ ಕಪ್ಪು ಸೂಟ್ಕೇಸ್ ಕೆಲವು ಕಾಲ ವಾರಸುದಾರರಿಲ್ಲದೆ ಕಂಡುಬಂದಿದ್ದರಿಂದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಬಾಂಬ್ ಪತ್ತೆ ದಳದೊಂದಿಗೆ ಸ್ಥಳಕ್ಕೆ ಆಗಮಿಸಬೇಕಾಯಿತು. ಸೂಕ್ತ ಎಚ್ಚರಿಕೆಯೊಂದಿಗೆ ಬಾಂಬ್ ಪತ್ತೆ ದಳದವರು ಸೂಟ್ಕೇಸ್ಅನ್ನು ಪರೀಕ್ಷಿಸಿದ್ದು, ಅದು ಮಾಮೂಲಿ ಬಟ್ಟೆ ಇರುವ ಸೂಟ್ಕೇಸ್ ಎಂಬುದು ಖಚಿತವಾಗುತ್ತಿದ್ದಂತೆ ಸುತ್ತಮುತ್ತಲ ಜನರಲ್ಲಿ ಮೂಡಿದ್ದ ಆತಂಕ ಮರೆಯಾಯಿತು.
ಅದಾಗ್ಯೂ ಆ ಸೂಟ್ಕೇಸ್ ಅಲ್ಲಿ ಏಕೆ ಬಂತು, ಯಾರು ಯಾಕೆ ಇಟ್ಟು ಹೋದರು ಎಂಬಿತ್ಯಾದಿ ವಿಷಯಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದಕ್ಕಾಗಿ ಸುತ್ತಮುತ್ತಲ ಸಿಸಿಟಿವಿ ಕ್ಲಿಪ್ಪಿಂಗ್ಗಳನ್ನೂ ಪರಿಶೀಲಿಸುವ ಕೆಲಸವೂ ನಡೆಯುತ್ತಿದೆ.