ವಿವಾಹಿತ ಮಹಿಳೆಯರ ಬ್ಲ್ಯಾಕ್​ಮೇಲ್​

Black mail
Published on

ಅವಿನಾಶ ಮೂಡಂಬಿಕಾನ ಬೆಂಗಳೂರು: ವಿವಾಹಿತ ಮಹಿಳೆಯರ ಖಾಸಗಿ ದೃಶ್ಯ ಸೆರೆಹಿಡಿದು ಬ್ಲ್ಯಾಕ್​ವೆುೕಲ್ ಮಾಡಿದ್ದ ಇಬ್ಬರು ವ್ಯಕ್ತಿಗಳು ‘ಪರಿಹಾರ’ ಕೌಟುಂಬಿಕ ಸಲಹಾ ಕೇಂದ್ರದ ಆಪ್ತ ಸಮಾಲೋಚಕರ ಕೈಗೆ ಸಿಕ್ಕಿಬಿದ್ದು ಪೇಚಿಗೆ ಸಿಲುಕಿದ್ದಾರೆ.

ಖಾಸಗಿ ದೃಶ್ಯ ಸೆರೆಹಿಡಿದು ಬ್ಲ್ಯಾಕ್​ಮೇಲ್​ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯರು ಈ ಬಗ್ಗೆ ಎಚ್ಚರ ವಹಿಸಬೇಕು. | ಬಿ.ಎಸ್. ಸರಸ್ವತಿ ಆಪ್ತ ಸಮಾಲೋಚಕಿ

ಕೋರಮಂಗಲದಲ್ಲಿ ಪತಿಯ ಚಿಕಿತ್ಸೆಗಾಗಿ ಹಣ ಹೊಂದಿಸಲು ಉದ್ಯಮಿಯೊಂದಿಗೆ ಸಲುಗೆ ಬೆಳೆಸಿದ ವಿವಾಹಿತ ಮಹಿಳೆ ಸದ್ಯ ಕ್ಯಾನ್ಸರ್​ಗೆ ತುತ್ತಾಗಿದ್ದು, ಉದ್ಯಮಿಯ ಸಾಲ ಹಿಂದಿರುಗಿಸಿದರೂ ಆಕೆಯ ಖಾಸಗಿ ದೃಶ್ಯ ತೋರಿಸಿ ಬ್ಲ್ಯಾಕ್​ಮೇಲ್​ ಮಾಡಿ ಸಿಕ್ಕಿಬಿದ್ದಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ಫೇಸ್​ಬುಕ್​ನಲ್ಲಿ ಪರಿಚಯವಾದ ತನಗಿಂತ ಹೆಚ್ಚು ವಯಸ್ಸಿನ ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಸರ್ಕಾರಿ ನೌಕರ, ಲಾಕ್​ಡೌನ್ ಸಮಯದಲ್ಲಿ ಭೇಟಿಯಾಗದಿದ್ದಕ್ಕೆ ಆಕ್ರೋಶಗೊಂಡು ಆಕೆಯೊಂದಿಗಿನ ವೈಯಕ್ತಿಕ ಫೋಟೋವನ್ನು ಪತಿಯ ಅಣ್ಣನಿಗೆ ಕಳುಹಿಸಿ ಫಜೀತಿಗೊಳಗಾಗಿದ್ದಾನೆ.

ಪತಿಯ ಉಳಿಸಲು ಪರದಾಟ: ಕೋರಮಂಗಲದ 40 ವರ್ಷದ ಮಹಿಳೆಗೆ 16 ವರ್ಷಗಳ ಹಿಂದೆ ಆಟೋ ಚಾಲಕನೊಂದಿಗೆ ವಿವಾಹವಾಗಿತ್ತು. ದಂಪತಿಗೆ ಜನಿಸಿದ ಮಗು ನ್ಯುಮೋನಿಯಾಗೆ ತುತ್ತಾಗಿ ಮೃತಪಟ್ಟಿತ್ತು. ವರ್ಷದ ಹಿಂದೆ ಪತಿ ಅನಾರೋಗ್ಯಕ್ಕೀಡಾಗಿದ್ದಾಗ ಚಿಕಿತ್ಸೆಗೆ 1 ಲಕ್ಷ ರೂ. ಬೇಕಿದ್ದರಿಂದ ಮನೆ ಸಮೀಪದಲ್ಲಿದ್ದ 50 ವರ್ಷದ ಉದ್ಯಮಿ ಬಳಿ ಸಾಲ ಕೇಳಿದ್ದಳು. ತನ್ನ ಜತೆ ಸಹಕರಿಸಿದರೆ ಹಣ ಕೊಡುವುದಾಗಿ ಆತ ಆಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದ. ಪತಿ ಗುಣಮುಖನಾದ ಬಳಿಕ ಸಾಲ ಹಿಂದಿರುಗಿಸಿದ್ದ ಮಹಿಳೆ, ಸಲುಗೆ ಮುಂದುವರಿಸಲು ನಿರಾಕರಿಸಿದ್ದಳು. ಆದರೆ, ಉದ್ಯಮಿ ಆಕೆಯೊಂದಿಗಿನ ಖಾಸಗಿ ದೃಶ್ಯವನ್ನು ತೋರಿಸಿ, ತಾನು ಹೇಳಿದಂತೆ ಕೇಳದಿದ್ದರೆ ಜಾಲತಾಣದಲ್ಲಿ ಅಪ್​ಲೋಡ್ ಮಾಡುವುದಾಗಿ ಹೆದರಿಸಿದ್ದ. ಇತ್ತೀಚೆಗೆ ಮಹಿಳೆ ನ್ಯಾಯಕ್ಕಾಗಿ ‘ಪರಿಹಾರ’ ಕೇಂದ್ರದ ಮೊರೆ ಹೋಗಿದ್ದಳು. ಉದ್ಯಮಿಯನ್ನು ಕಚೇರಿಗೆ ಕರೆಸಿದ ಆಪ್ತ ಸಮಾಲೋಚಕರು ವಿಚಾರಣೆ ನಡೆಸಿ, ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಫೇಸ್​ಬುಕ್ ಫ್ರೆಂಡ್​ನ ಧೋಖಾ

ಕೆ.ಆರ್.ಪುರ ನಿವಾಸಿ 36 ವರ್ಷದ ಮಹಿಳೆಯ ಪತಿ ಅಂಗವಿಕಲನಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು. ಎರಡು ಬಾಡಿಗೆ ಮನೆಗಳಿಂದ ಬರುತ್ತಿದ್ದ ಆದಾಯದಲ್ಲಿ ಕುಟುಂಬದ ಜೀವನ ಸಾಗುತ್ತಿದೆ. 8 ತಿಂಗಳ ಹಿಂದೆ ಫೇಸ್​ಬುಕ್​ನಲ್ಲಿ ಮಹಿಳೆಗೆ 27 ವರ್ಷದ ಅವಿವಾಹಿತ ಸರ್ಕಾರಿ ನೌಕರನ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರೂ ಅನೈತಿಕ ಸಂಬಂಧ ಹೊಂದಿದ್ದರು. ಯುವಕ ಹಲವು ನೆಪವೊಡ್ಡಿ ಮಹಿಳೆಯಿಂದ ಆಗಾಗ ಹಣ ಪಡೆದಿದ್ದ. ಲಾಕ್​ಡೌನ್ ವೇಳೆ ಆಕೆಗೆ ಕರೆ ಮಾಡುತ್ತಿದ್ದ ಯುವಕ, ತಾನಿದ್ದಲ್ಲಿಗೆ ಬಂದು ಹಣ ನೀಡುವಂತೆ ಒತ್ತಾಯಿಸಿದ್ದ. ಕೊಡದಿದ್ದರೆ ನಿನ್ನೊಂದಿಗೆ ಕಳೆದ ಖಾಸಗಿ ಕ್ಷಣಗಳ ಫೋಟೋವನ್ನು ಪತಿಯ ಸಂಬಂಧಿಕರ ಮೊಬೈಲ್​ಗೆ ಕಳುಹಿಸುವುದಾಗಿ ಬೆದರಿಸಿದ್ದ. ಇದಕ್ಕೆ ಪ್ರತಿಕ್ರಿಯಿಸದಿದ್ದಾಗ ಖಾಸಗಿ ದೃಶ್ಯವನ್ನು ಮಹಿಳೆಯ ಪತಿಯ ಅಣ್ಣನ ಮೊಬೈಲ್​ಗೆ ಕಳುಹಿಸಿದ್ದ. ಈ ವಿಚಾರ ಮಹಿಳೆಯ ಪತಿಗೆ ತಿಳಿದು ಪ್ರಕರಣ ‘ಪರಿಹಾರ’ ಕೇಂದ್ರದ ಮೆಟ್ಟಿಲೇರಿತ್ತು. ಅಲ್ಲಿ ವಿಚಾರಣೆ ನಡೆಸಿದಾಗ, ಆತ ತಪ್ಪೊಪ್ಪಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net