ದೃಷ್ಟಿ ಕಿತ್ತುಕೊಳ್ಳುತ್ತಿದೆ ಬ್ಲ್ಯಾಕ್ ಫಂಗಸ್! ಹುಬ್ಬಳ್ಳಿ ಕಿಮ್ಸ್​ಗೆ ದಾಖಲಾದವರು ಸಂಕಷ್ಟದಲ್ಲಿ, ಇಬ್ಬರ ಮಿದುಳಿನ ನರಮಂಡಲಕ್ಕೆ ಧಕ್ಕೆ

Black Fungus
Published on

| ಮರಿದೇವ ಹೂಗಾರ ಹುಬ್ಬಳ್ಳಿ

ಬ್ಲ್ಯಾಕ್ ಫಂಗಸ್ (ಮ್ಯೂಕೋರ್ ಮೈಕೋಸಿಸ್) ಇಲ್ಲಿನ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ 30 ಜನರ ದೃಷ್ಟಿ ಕಿತ್ತುಕೊಳ್ಳುತ್ತಿದೆ. ಅಲ್ಲದೆ, ಇಬ್ಬರ ಮಿದುಳಿನ ನರ ಮಂಡಲವನ್ನೂ ತಿನ್ನಲು ಆರಂಭಿಸಿದೆ! ಒಟ್ಟು 78 ಜನರು ಬ್ಲ್ಯಾಕ್ ಫಂಗಸ್​ನಿಂದ ಬಳಲುತ್ತಿದ್ದು, ಇವರಿಗೆಲ್ಲ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೇಗ ರೋಗ ಪತ್ತೆ ಹಚ್ಚದೆ ಇರುವುದರಿಂದ ಮೂಗಿನಿಂದ ಆರಂಭವಾದ ಫಂಗಸ್, ಕಣ್ಣು ಹಾಗೂ ಮಿದುಳನ್ನು ಹೊಕ್ಕುಬಿಟ್ಟಿದೆ. ಕಣ್ಣಿನ ತೊಂದರೆ ಅನುಭವಿಸುತ್ತಿರುವವರಿಗೆ ಈಗಾಗಲೆ ಚಿಕಿತ್ಸೆ ಶುರು ಮಾಡಲಾಗಿದೆ. ಈ ಪೈಕಿ ಅರ್ಧದಷ್ಟು ಜನರು ದೃಷ್ಟಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಮಿದುಳಿನ ನರಕ್ಕೆ ಧಕ್ಕೆಯಾಗಿರುವ ಇಬ್ಬರನ್ನು ಐಸಿಯುಗೆ ದಾಖಲಿಸಲಾಗಿದೆ.

ಸೈನಸ್​ರಾಯಿನೋದಿಂದ ಆರಂಭವಾಗುವ ಫಂಗಸ್ ಮನುಷ್ಯನಿಗೆ ತಲೆನೋವು, ಕಣ್ಣು ಬಾವು ಬರುವುದು, ಅರ್ಧ ಮುಖಬಾವು ಬರುವಂತೆ ಮಾಡುತ್ತದೆ. ಆರಂಭದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸಿದರೆ, ತೊಂದರೆ ಈಲ್ಲ. 2-3 ದಿನ ತಡ ಮಾಡಿದರೆ ದೃಷ್ಟಿಹೀನತೆ ಶುರುವಾಗುತ್ತದೆ. ಮೂಗಿನಿಂದ ಕಣ್ಣಿಗೆ ಸಂರ್ಪಸಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ರಕ್ತನಾಳ ಬ್ಲಾಕ್ ಆಗಬಹುದು. ಇದರಿಂದ ಕಣ್ಣಿನ ಗುಡ್ಡೆ ತಿರುಗಿಸಲಾಗುವುದಿಲ್ಲ, ದೃಷ್ಟಿ ಕಳೆದುಹೋದಂತಾಗುತ್ತದೆ. ಆಬಳಿಕ ಮಿದುಳಿನ ನರಮಂಡಲಕ್ಕೂ ಫಂಗಸ್ ವ್ಯಾಪಿಸಿಬಿಡುತ್ತಿದೆ ಎನ್ನುತ್ತಾರೆ ವೈದ್ಯರು.

ಚುಚ್ಚುಮದ್ದು ಅಭಾವ: ಬ್ಲ್ಯಾಕ್ ಫಂಗಸ್​ಗೆ ‘ಲಿಪೊಸೊಮಲ್ ಆಂಫೋಟೆರಿಸಿನ್ ಬಿ’ ಚುಚ್ಚುಮದ್ದು ಅಗತ್ಯ. ಧಾರವಾಡ ಜಿಲ್ಲೆಯಲ್ಲಿ ಈ ಚುಚ್ಚುಮದ್ದಿಗೆ ಬಹುಬೇಡಿಕೆ ಶುರುವಾಗಿದೆ. ಕಿಮ್ಸ್​ಗೆ ಅಂದಾಜು 2 ಸಾವಿರ ವೈಯಲ್ಸ್​ಗಳನ್ನು ಜಿಲ್ಲಾಡಳಿತ ಪೂರೈಕೆ ಮಾಡಬೇಕಿದೆ. ಜಿಲ್ಲಾಡಳಿತ ಈಗಾಗಲೆ ರಾಜ್ಯ ಸರ್ಕಾರಕ್ಕೆ ಚುಚ್ಚುಮದ್ದು ಅಗತ್ಯತೆ ಕುರಿತು ಪ್ರಸ್ತಾವನೆ ಸಲ್ಲಿಸಿದ್ದು, ಇನ್ನೂ ಪೂರೈಕೆಯಾಗಿಲ್ಲ.

ಸಾಮಾನ್ಯವಾಗಿ ಇದ್ದವರಿಗೆ ಈ ಫಂಗಸ್ ಬರುವುದಿಲ್ಲ. ಕರೊನಾ ಸೋಂಕು ತಗುಲಿದಾಗ, ಗುಣವಾದ ನಂತರ ಮಧುಮೇಹಿಗಳು ನಿಯಮಿತವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆ ಮೇರೆಗೆ ಮಧುಮೇಹದ ಔಷಧ ತೆಗೆದುಕೊಳ್ಳಬೇಕು. ಹೀಗಿದ್ದರೆ ಬ್ಲ್ಯಾಕ್ ಫಂಗಸ್ ಹರಡುವುದು ಕಡಿಮೆ.

| ಡಾ.ರಾಜಶೇಖರ ದ್ಯಾಬೇರಿ ಕಿಮ್ಸ್​ ವೈದ್ಯಕೀಯ ಉಪ ಅಧೀಕ್ಷಕ

ಬ್ಲ್ಯಾಕ್ ಫಂಗಸ್ ಪ್ರಕರಣಗಳು ಈಗೀಗ ಹೆಚ್ಚುತ್ತಿದ್ದು, 30 ಜನರ ಕಣ್ಣಿನ ಭಾಗಕ್ಕೆ ಹಾಗೂ ಇಬ್ಬರ ಮಿದುಳಿನ ಭಾಗಕ್ಕೆ ಬ್ಲ್ಯಾಕ್ ಫಂಗಸ್ ಹರಡಿದೆ. ಇವರಿಗೆಲ್ಲ ನಮ್ಮ ತಂಡ ಚಿಕಿತ್ಸೆ ನೀಡುತ್ತಿದೆ.

| ಡಾ. ರವೀಂದ್ರ ಗದಗ ಕಿಮ್ಸ್​ ಇಎನ್​ಟಿ ವಿಭಾಗದ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net