More

    ಎಟಿಎಂಗೆ ತುಂಬಬೇಕಿದ್ದ 75 ಲಕ್ಷ ರೂ. ದೋಚಿದ ದುರುಳರು; ಹೆದರಿದ ವ್ಯಾನ್ ಚಾಲಕನನ್ನು ಕೊಂದೇ ಬಿಟ್ಟರು!

    ಬೆಂಗಳೂರು: ಎಟಿಎಂ ಕೇಂದ್ರಕ್ಕೆ ಹಣ ತುಂಬುವ ವಾಹನ ಚಾಲಕನಿಗೆ ಹಣದ ಆಮಿಷವೊಡ್ಡಿ ಹತ್ಯೆ ಮಾಡಿ ಸಕಲೇಶಪುರದ ಘಾಟ್‌ನಲ್ಲಿ ಎಸೆದು 75 ಲಕ್ಷ ರೂ. ದೋಚಿದ ನಾಲ್ವರನ್ನು ಗೋವಿಂದಪುರ ಪೊಲೀಸರು ಪ್ರಕರಣ ನಡೆದ ಮೂರು ವರ್ಷಗಳ ಬಳಿಕ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಎನ್.ಕುಮಾರ್ (23), ಮಧುಸೂದನ್ (23) ಮೈಸೂರಿನ ಕೆ.ಆರ್.ನಗರದ ಪ್ರಸನ್ನ (31) ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಹೇಶ್ (22) ಬಂಧಿತರು. ಆರೋಪಿಗಳಿಂದ 3.5 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಖಾಲಿ ಪೆಟ್ಟಿಗೆ, 2 ಕಾರುಗಳು, 121.8 ಗ್ರಾಂ ಚಿನ್ನದ ಒಡವೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    2018 ನವೆಂಬರ್ 5ರಂದು ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗವಾರ ಮುಖ್ಯ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಸೇಫ್ ಗಾರ್ಡ್ ರೈಡರ್ಸ್ ಕಂಪನಿಯ ಸಿಬ್ಬಂದಿ ಹಣ ತುಂಬಿಸಲು ಹೋಗಿದ್ದಾಗ ವಾಹನ ಚಾಲಕ ಅಬ್ದುಲ್ ಶಾಹೀದ್‌ಗೆ 5 ಲಕ್ಷ ರೂ. ಕೊಡುವುದಾಗಿ ಆಮಿಷವೊಡ್ಡಿ 75 ಲಕ್ಷ ರೂ. ಇದ್ದ ವಾಹನ ಸಮೇತ ಪರಾರಿಯಾಗಿದ್ದರು. ಆದರೆ, ಆರೋಪಿಗಳೊಂದಿಗೆ ಸಕಲೇಶಪುರದತ್ತ ತೆರಳುತ್ತಿದ್ದಾಗ ಆತಂಕಗೊಂಡ ಅಬ್ದುಲ್ ಶಾಹೀದ್, ‘‘ನನಗೆ ಭಯವಾಗುತ್ತದೆ. ಯಾವ ಹಣವೂ ಬೇಡ. ನಾನು ವಾಪಸ್ ಹೋಗುತ್ತೇನೆ. ನನ್ನನ್ನು ಇಲ್ಲಿಯೇ ಬಿಟ್ಟು ಬಿಡಿ’’ ಎಂದು ಗೋಗರೆದಿದ್ದ. ಆತನನ್ನು ಬಿಟ್ಟರೆ ಪೊಲೀಸರಿಗೆ ನಮ್ಮ ಮಾಹಿತಿ ಸಿಗಬಹುದು. ಇದರಿಂದ ನಮಗೆ ಉಳಿಗಾಲ ಇಲ್ಲ ಎಂದುಕೊಂಡ ಆರೋಪಿಗಳಾದ ಮಹೇಶ್ ಮತ್ತು ಮಧುಸೂದನ್ ಕಾರಿನ ಗ್ಲಾಸ್ ಒರೆಸುವ ಟವೆಲ್​ನಿಂದ ಅಬ್ದುಲ್ ಶಾಹೀದ್‌ನ ಕತ್ತು ಬಿಗಿದು ವಾಹನದೊಳಗೆ ಹತ್ಯೆ ಮಾಡಿದ್ದರು. ಬಳಿಕ ಸಕಲೇಶಪುರ ಬ್ಯೂಟಿ ಸ್ಪಾಟ್ ಪಕ್ಕದ ಘಾಟ್‌ನಲ್ಲಿ ಮೃತದೇಹವನ್ನು ಟವೆಲ್ ಸಮೇತ ಎಸೆದು ಶ್ರೀರಂಗಪಟ್ಟಣಕ್ಕೆ ಹೋಗಿ ಲಾಡ್ಜ್‌ನಲ್ಲಿ 75 ಲಕ್ಷ ರೂ.ಗಳನ್ನು ಹಂಚಿಕೊಂಡಿದ್ದರು. ಕೆಲ ದಿನಗಳ ಬಳಿಕ ಅಬ್ದುಲ್ ಮೃತದೇಹ ಪತ್ತೆಯಾಗಿ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು.

    ಇದನ್ನೂ ಓದಿ: ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…

    ಸಿಕ್ಕಿಬಿದ್ದಿದ್ದು ಹೇಗೆ?: ಸೇಫ್ ಗಾರ್ಡ್ ರೈಡರ್ಸ್ ಕಂಪನಿ ಸಿಬ್ಬಂದಿ ಎಟಿಎಂ ವಾಹನದೊಂದಿಗೆ ಪರಾರಿಯಾದ ಬಗ್ಗೆ ಅಬ್ದುಲ್ ಶಾಹೀದ್ ವಿರುದ್ಧ ಕೆ.ಜಿ. ಹಳ್ಳಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಸಿಸಿ ಕ್ಯಾಮರಾ ಪರಿಶೀಲಿಸಿ ತನಿಖೆ ನಡೆಸಿದರೂ ಆರೋಪಿಗಳ ಸಣ್ಣ ಸುಳಿವೂ ಸಿಗಲಿಲ್ಲ. ಇತ್ತೀಚೆಗೆ ಪ್ರಕರಣವನ್ನು ಗೋವಿಂದಪುರ ಠಾಣೆಗೆ ವರ್ಗಾವಣೆ ಮಾಡಿ ತನಿಖೆ ನಡೆಸುವಂತೆ ಸೂಚಿಸಲಾಗಿತ್ತು. ಗೋವಿಂದಪುರ ಠಾಣೆಯ ಇನ್‌ಸ್ಪೆಕ್ಟರ್ ಆರ್. ಪ್ರಕಾಶ್ ಅವರ ತಂಡ ಮತ್ತೆ ಅದೇ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿಗಳ ಅಸ್ಪಷ್ಟವಾಗಿದ್ದ ದೃಶ್ಯ ಪತ್ತೆಯಾಗಿತ್ತು. ಇದನ್ನು ಸೇಫ್ ಗಾರ್ಡ್ ರೈಡರ್ಸ್ ಸಂಸ್ಥೆಯ ಸಿಬ್ಬಂದಿಗೆ ತೋರಿಸಿ ವಿಚಾರಿಸಿದಾಗ ಕುಮಾರ್ ಮತ್ತು ಪ್ರಸನ್ನ ಅವರ ಸುಳಿವು ಸಿಕ್ಕಿತ್ತು. ಇವರನ್ನು ವಶಕ್ಕೆ ಪಡೆದು ಇವರು ಕೊಟ್ಟ ಮಾಹಿತಿ ಆಧರಿಸಿ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ.

    ಇದನ್ನೂ ಓದಿ: ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!

    ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು: ಆರೋಪಿಗಳ ಪೈಕಿ ಪ್ರಸನ್ನ ಮತ್ತು ಕುಮಾರ್ ಈ ಹಿಂದೆ ಸೇಫ್ ಗಾರ್ಡ್ ರೈಡರ್ಸ್ ಕಂಪನಿಯಲ್ಲಿ ಎಟಿಎಂಗಳಿಗೆ ಹಣ ತುಂಬಿಸುವ ಕಾರಿನ ಚಾಲಕರಾಗಿದ್ದರು. ನಂತರ ಕೆಲಸ ಬಿಟ್ಟು ದರೋಡೆ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು. 2018ರಲ್ಲಿ ಲಕ್ಷಾಂತರ ರೂಪಾಯಿಯನ್ನು ಎಟಿಎಂಗೆ ತುಂಬಲು ಕೊಂಡೊಯ್ಯುತ್ತಿದ್ದ ಕಂಪನಿಯ ವಾಹನವನ್ನು ಹಿಂಬಾಲಿಸಿಕೊಂಡು ಹೋಗಿದ್ದರು. ಸಿಬ್ಬಂದಿ ಎಟಿಎಂ ಕೇಂದ್ರಕ್ಕೆ ಒಂದಿಷ್ಟು ಹಣ ತುಂಬಲು ಹೋದಾಗ ಮೊದಲೇ ಪರಿಚಯವಿದ್ದ ಚಾಲಕ ಅಬ್ದುಲ್ ಶಾಹೀದ್‌ಗೆ ಹಣದ ಆಮಿಷವೊಡ್ಡಿ 75 ಲಕ್ಷ ರೂ. ಮತ್ತು ವಾಹನ ಸಮೇತ ಪರಾರಿಯಾಗಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಕರ್ತವ್ಯನಿರತ ಪೊಲೀಸ್ ನಿಧನ; ಡ್ಯೂಟಿಯಲ್ಲಿದ್ದಾಗಲೇ ತಲೆಸುತ್ತು ಬಂದು ಬಿದ್ದ ಹೆಡ್​ ಕಾನ್ಸ್​ಟೆಬಲ್​

    ಹೊಸ ಮನೆ ಕಟ್ಟಿದ ಆರೋಪಿಗಳು: ನಾಲ್ವರೂ ಕದ್ದ ಹಣದಲ್ಲಿ ತಮ್ಮ ಸ್ವಂತ ಊರುಗಳಲ್ಲಿ ಹೊಸ ಮನೆಗಳನ್ನು ಕಟ್ಟಿದ್ದಾರೆ. ಜತೆಗೆ ಕಾರುಗಳು, ಬೈಕ್, ಚಿನ್ನಾಭರಣ ಖರೀದಿಸಿದ್ದಾರೆ. ಇತ್ತೀಚೆಗೆ ಕುಮಾರ್ ತಂದೆ ಅನಾರೋಗ್ಯಕ್ಕೊಳಗಾದಾಗ, ಮಹೇಶ್‌ಗೆ ಅಪಘಾತ ಉಂಟಾದಾಗ ಚಿಕಿತ್ಸೆಗೆ ಈ ಹಣ ಬಳಸಿಕೊಂಡಿದ್ದಾರೆ. ನಂತರ ಪೊಲೀಸರಿಗೆ ತಮ್ಮ ಸುಳಿವು ಸಿಗದಂತೆ ಎಚ್ಚರಿಕೆ ವಹಿಸಿ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಪ್ರಸನ್ನ ಮೈಸೂರಿನಲ್ಲಿ ಬೆಂಗಳೂರಿಗೆ ಎಳನೀರು ಕಳುಹಿಸುವ ವ್ಯವಹಾರ ನಡೆಸುತ್ತಿದ್ದರೆ, ಮಧುಸೂದನ್, ಕುಮಾರ್, ಮಹೇಶ್ ಬೆಂಗಳೂರಿನಲ್ಲಿ ಬಾಡಿಗೆ ಟ್ಯಾಕ್ಸಿ ಚಾಲನೆ ಮಾಡಿಕೊಂಡಿದ್ದರು. ಎಟಿಎಂಗೆ ತುಂಬಬೇಕಿದ್ದ ಹಣದಿಂದ ಸಂಪಾದಿಸಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ! 

    ಕರೊನಾ ಲಸಿಕೆ ಹಾಕಿಸಿಕೊಳ್ಳುವ ಕುರಿತು ನಿಮ್ಮಲ್ಲಿ ಈ ಗೊಂದಲಗಳಿವೆಯೇ? ಹಾಗಿದ್ದರೆ ಇಲ್ಲಿವೆ ನೋಡಿ ಸ್ಪಷ್ಟೀಕರಣ…

    ಈ ಐದಾರು ಹಳ್ಳಿಗಳ ಜನರು ಕರೊನಾ ಲಸಿಕೆ ತೆಗೆದುಕೊಳ್ಳಲಿಕ್ಕೇ ಹೆದರುತ್ತಿದ್ದಾರೆ!; ಇವರು ಹೇಳುತ್ತಿರುವ ಕಾರಣವೇ ಭಯಾನಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts