

ರಾಮನಗರ : ಬಿಜೆಪಿ ನಾಯಕರು ಎಂದೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಅಧಿಕಾರ ಹಿಡಿಯಲು ವಾಮಮಾರ್ಗ ಹಿಡಿಯುತ್ತಾರೆ. ಅವರ ಪ್ರಯತ್ನಕ್ಕೆ ನಾವು ಈ ಬಾರಿ ಅವಕಾಶ ನೀಡುವುದಿಲ್ಲ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದರು.
ರಾಮನಗರ ತಾಲೂಕಿನ ಕೂಟಗಲ್ ಗ್ರಾಪಂ ಆವರಣದಲ್ಲಿ ಸೋಮವಾರ ನವೀಕರಣ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಜನರಿಂದ ಆಯ್ಕೆಯಾಗಿ ಒಂದು ಬಾರಿಯೂ ಅಧಿಕಾರ ಮಾಡಿಲ್ಲ. ಅವರ ಆಮಿಷಕ್ಕೆ ಯಾರೂ ಸೊಪ್ಪು ಹಾಕುವುದಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಬಿಜೆಪಿ 1200 ಕೋಟಿ ರೂ. ಸಂಗ್ರಹ ಮಾಡಿದೆ ಎಂದು ಆ ಪಕ್ಷದ ನಾಯಕ ಯತ್ನಾಳ್ ಅವರೇ ಹೇಳುತ್ತಿದ್ದಾರೆ. ಇಂತಹ ಪ್ರಯತ್ನ ಖಂಡಿತಾ ನಡೆಯುತ್ತಿದೆ. ಈ ಹಿಂದೆ ನಮ್ಮ ಶಾಸಕರೊಬ್ಬರು ಇದರ ಬಗ್ಗೆ ಹೇಳಿದ್ದರು. ಇದು ಸುಳ್ಳೆಂದು ಬಿಜೆಪಿಯವರು ಹೇಳಿದ್ದರು. ಈಗ ಅವರ ಪಕ್ಷದ ನಾಯಕರೇ ಇದನ್ನು ಹೇಳುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಉರುಳಿಸಲು ಬಿಜೆಪಿಯವರು ಸಿಎಂ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಾವೆಲ್ಲ ಶಾಸಕರು ಒಗ್ಗಟ್ಟಾಗಿದ್ದು, ಸರ್ಕಾರ ಉರುಳಿಸಲು ಬಿಡುವುದಿಲ್ಲ. ಈಗ ಸಿದ್ದರಾಮಯ್ಯ ಅವರ ಮೇಲೆ ಪ್ರಕರಣ ದಾಖಲಿಸಿರೋದು ಅದೇ ಉದ್ದೇಶಕ್ಕೆ ಎಂದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಎಡಿಜಿಪಿ ಚಂದ್ರಶೇಖರ್ ಪದಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಾಲಕೃಷ್ಣ, ಏನಂತ ಪದಬಳಕೆ ಮಾಡಿದ್ದಾರೆ, ಯಾವ ಹಂದಿಗೆ ಹೋಲಿಕೆ ಮಾಡಿದ್ದಾರೆ. ಹಂದಿ ಎಂದರೆ ವರಹ ಅಂತ. ಅದನ್ನು ಬೇರೆ ರೀತಿ ಏಕೆ ಅರ್ಥೈಸಿಕೊಳ್ಳುತ್ತೀರಿ. ಅವರ ಅಭಿಮಾನಿಗಳು ಬೇರೆ ರೀತಿ ಅರ್ಥಮಾಡಿಕೊಳ್ಳಬಾರದು. ಅವರ ಆಲೋಚನೆ ಹೇಗಿರುತ್ತೋ ಹಾಗೆ ತಿಳಿದುಕೊಳ್ಳುತ್ತಾರೆ ಎಂದರು.
ಒಬ್ಬ ಐಪಿಎಸ್ ಅಧಿಕಾರಿಯನ್ನು ಇವರು ಯಾವ ರೀತಿ ಸಂಬೋಧಿಸುತ್ತಿದ್ದಾರೆ ಎಂದು ನೋಡಿ. ಅಧಿಕಾರಿಗಳ ಜತೆ ಗುದ್ದಾಡುವುದನ್ನು ಬಿಡಲು ಹೇಳಿ. ಕೆಲಸಕ್ಕೆ ಬಾರದವರ ಜತೆ ಗುದ್ದಾಡಲು ಹೋದರೆ ಹೀಗೆಯೇ ಆಗುವುದು ಎಂದು ಎಡಿಜಿಪಿ ಹೇಳಿಕೆಯನ್ನು ಶಾಸಕ ಸಮರ್ಥಿಸಿಕೊಂಡರು.
ಗ್ರಾಪಂ ಅಧ್ಯಕ್ಷೆ ಎ.ಎಲ್.ಸವಿತಾ ಶಿವಕುಮಾರ್, ಪಿಡಿಒ ಕೆ.ಎಸ್. ಸೋಮಶೇಖರ್, ಸದಸ್ಯರಾದ ಗಂಗಾಧರ್‌ಗೌಡ, ನಂದೀಶ್, ಭಾಗ್ಯನಟರಾಜು, ಜಗದೀಶ್, ಸುಶೀಲಮ್ಮ, ಮಂಚೇಗೌಡ, ಲಿಂಗಾಚಾರಿ ಗ್ರಾಪಂ ಮಾಜಿ ಅಧ್ಯಕ್ಷ ರಾಮಚಂದ್ರಯ್ಯ, ಮುಖಂಡರಾದ ರವಿ, ಮಹದೇವಯ್ಯ, ರಾಮಕೃಷ್ಣಯ್ಯ, ವೇದಮೂರ್ತಿ, ಹೊಸೂರು ಜಗದೀಶ್, ರಮೇಶ್, ಅಂಕೂಗೌಡ ಇದ್ದರು.
ಶೀಘ್ರ ಅಭ್ಯರ್ಥಿ ಆಯ್ಕೆ
ಚನ್ನಪಟ್ಟಣ ಉಪಚುನಾವಣೆಗೆ ನಮ್ಮ ಪಕ್ಷದಿಂದ ಅಭ್ಯರ್ಥಿ ಆಯ್ಕೆ ಬಗ್ಗೆ ಕ್ಷೇತ್ರದಲ್ಲಿ ಓಡಾಟ ನಡೆಸಿ ಮುಖಂಡರ ಜತೆ ಚರ್ಚೆ ಮಾಡಲಾಗುತ್ತಿದೆ. ಅಂತಿಮವಾಗಿ ನಮ್ಮ ಪ್ರತಿ ಪಕ್ಷದವರು ಯಾವ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಮೇಲೆ ನಮ್ಮ ಪಕ್ಷದ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದು ಚನ್ನಪಟ್ಟಣ ಅಭ್ಯರ್ಥಿ ಘೋಷಣೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಮಾಜಿ ಸಂಸದ ಡಿ.ಕೆ. ಸುರೇಶ್ ಸ್ಪರ್ಧೆ ವಿಚಾರವಾಗಿ ಪ್ರಶ್ನಿಸಿದ ಸಂದರ್ಭದಲ್ಲಿ ಉತ್ತರಿಸಿ, ಡಿ.ಕೆ.ಸುರೇಶ್ ಅವರು ಸದ್ಯಕ್ಕೆ ಚುನಾವಣೆ ಬೇಡ ಅನ್ನುತ್ತಿದ್ದಾರೆ. ಸಾಧಕ, ಬಾಧಕ ಎಲ್ಲವನ್ನೂ ನೋಡಿ ಅಭ್ಯರ್ಥಿ ಆಯ್ಕೆ ಮಾಡ್ತೇವೆ. ಚನ್ನಪಟ್ಟಣ ಚುನಾವಣಾ ಉಸ್ತುವಾರಿ ಚಲುವರಾಯಸ್ವಾಮಿ ಸಭೆ ನಡೆಸಿದ್ದಾರೆ. ಶೀಘ್ರ ಅಭ್ಯರ್ಥಿ ಆಯ್ಕೆ ಮಾಡ್ತೇವೆ ಎಂದು ಶಾಸಕರು ಹೇಳಿದರು.
ಕಾಂಗ್ರೆಸ್‌ಗೆ ಆಹ್ವಾನ ವಿಚಾರ
ಸಿ.ಪಿ. ಯೋಗೇಶ್ವರ್ ಅವರನ್ನು ನಾವು ಆಹ್ವಾನಿಸಿಲ್ಲ. ಅವರ ಮುಖಂಡರ ಕಡೆಯಿಂದ ಪಕ್ಷಕ್ಕೆ ಕರೆತರುವಂತೆ ಹೇಳ್ತಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ಪಕ್ಷಕ್ಕೆ ಬಂದಿದ್ದರೆ ಸ್ವಾಗತಿಸಿ ಗೌರವ ನೀಡುತ್ತಿದ್ದೆವು. ಆದರೆ ಈಗ ಕುಮಾರಸ್ವಾಮಿ ಜತೆ ಸೇರಿಸಿಕೊಂಡಿದ್ದಾರೆ. ಅವರು ಯಾವ ರೀತಿ ನಡೆಸಿಕೊಳ್ತಾರೆ ನೋಡೋಣ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಹಣೆಬರಹ ಏನಿತ್ತೋ ಗೊತ್ತಿಲ್ಲ. ಆಗ ಬಂದಿದ್ದೆ ಗೌರವವಾಗಿ ನಡೆಸಿಕೊಳ್ತಿದ್ವಿ ಎಂದು ಸಿ.ಪಿ.ಯೋಗೇಶ್ವರ್‌ಗೆ ಕಾಂಗ್ರೆಸ್ ಆಹ್ವಾನ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್?
ಸಿದ್ದರಾಮಯ್ಯ ಬಳಿಕ ನಾವು ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಕ್ಲೇಮ್ ಮಾಡುತ್ತೇವೆ. ಅಲ್ಲಿವರೆಗೂ ಸಿದ್ದರಾಮಯ್ಯ ಪರವಾಗಿ ಇರುತ್ತೇವೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಜತೆಗೂಡಿ ಕೆಲಸ ಮಾಡಿದ್ದಾರೆ. ಸರ್ಕಾರವನ್ನೂ ಅಸ್ತಿತ್ವಕ್ಕೆ ತಂದಿದ್ದಾರೆ. ನಮ್ಮ ಜಿಲ್ಲೆಗೆ ಸಿಎಂ ಸ್ಥಾನ ಸಿಗಲಿ ಅನ್ನುವುದು ನಮ್ಮ ಆಸೆ, ಆಕಾಂಕ್ಷೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಪರೋಕ್ಷವಾಗಿ ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಬಾಲಕೃಷ್ಣ ಹೇಳಿದರು.
ಎಲ್ಲದಕ್ಕೂ ಡಿಕೆಶಿ ಹೆಸರು ಹೇಳುವುದು ಸರಿಯಲ್ಲ
ಎಡಿಜಿಪಿ ಪತ್ರ ಕೆಪಿಸಿಸಿ ಕಚೇರಿಯಲ್ಲಿ ತಯಾರಾಗಿದೆ ಎಂಬುದಕ್ಕೆ ಏನಾದರು ದಾಖಲೆ ಇದ್ದರೆ ತೋರಿಸಲಿ, ವೀಡಿಯೋ ೂಟೇಜ್ ಇದ್ದರೆ ತೋರಿಸಲು ಹೇಳಿ. ಸುಮ್ಮನೆ ಡಿ.ಕೆ. ಶಿವಕುಮಾರ್ ಮೇಲೆ ಆರೋಪ ಮಾಡುವುದು ಸರಿಯಲ್ಲ. ಎಲ್ಲದಕ್ಕೂ ಡಿಕೆಶಿ ಹೆಸರು ಹೇಳುವುದು ಸರಿಯಲ್ಲ. ಪದೆಪದೇ ಅವರ ಹೆಸರು ಎಳೆದು ತಂದು ಒಕ್ಕಲಿಗ ಕಮ್ಯುನಿಟಿ ಲೀಡರ್ ಆಗಬೇಕು ಅಂತ ಮಾತನಾಡುತ್ತಾರೆ. ಅವರ ಬಳಿ ಕೆಪಿಸಿಸಿ ಕಚೇರಿಯಲ್ಲಿ ಸಿಸಿ ಕ್ಯಾಮರಾ ವಿಡಿಯೋ ಇದ್ದರೆ ಬಿಡುಗಡೆ ಮಾಡಲಿ. ಇಲ್ಲದಿದ್ದರೆ ಕೂಡಲೇ ಡಿಸಿಎಂ ಬಳಿ ಕ್ಷಮೆಯಾಚಿಸಲಿ ಎಂದು ಶಾಸಕರು ಸವಾಲು ಹಾಕಿದರು.