

ಮದ್ದೂರು: ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ತಾಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಗುರುವಾರ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು. ವಾಹನ ಸಂಚಾರ ತಡೆದ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಮನ್‌ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹಿಸುವ ಉದ್ದೇಶದಿಂದ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್, ಡೀಸೆಲ್, ಆಹಾರ ಪದಾರ್ಥಗಳು, ವಿದ್ಯುತ್ ದರ ಸೇರಿದಂತೆ ಅಗತ್ಯ ವಸ್ತುಗಳ ದರ ಹೆಚ್ಚಿಸಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರೈತರು ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಒಳಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು. ಇಲ್ಲದಿದ್ದರೆ, ಸರ್ಕಾರದ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನ್‌ಮುಲ್ ನಿರ್ದೇಶಕಿ ರೂಪಾ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸಿ.ಕೆ.ಸತೀಶ್, ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ, ಮುಖಂಡರಾದ ಕೃಷ್ಣೇಗೌಡ, ಎಂ.ಸಿ.ಸಿದ್ದು, ಎಂ.ಸತೀಶ್, ಮ.ನ.ಪ್ರಸನ್ನಕುಮಾರ್, ವಿ.ಸಿ.ಯೋಗನಂದ, ವಿ.ಕೆ.ರವಿಕುಮಾರ್, ಮಧುಕುಮಾರ್, ಸಂತೋಷ್, ಸುಧಾಕರ್, ಕೆಂಪುಬೋರಯ್ಯ, ಮಮತಾ ಚಂದನ್, ರೂಪಾ, ಲಲಿತಾ ಸಿದ್ದರಾಜು, ಪೂರ್ಣಿಮಾ ಇದ್ದರು.