

ಮದ್ದೂರು: ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾಗಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮನ್‌ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು.
ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ಸೋಮವಾರ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಮಾತನಾಡಿ, ನರೇಂದ್ರ ಮೋದಿ ಅವರು 3 ನೇ ಬಾರಿಗೆ ಪ್ರಧಾನಿಯಾಗಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ರಾಜ್ಯದ 4 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಸಂತಸ ತಂದಿದೆ ಎಂದರು.
ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಸರ್ಕಾರ ರಚನೆ ಮಾಡುತ್ತಿರುವುದರಿಂದ ದೇಶ ಮತ್ತಷ್ಟು ಸಮಗ್ರ ಅಭಿವೃದ್ಧಿಯತ್ತ ದಾಪುಗಾಲು ಹಾಕಲಿದೆ. ಆರ್ಥಿಕತೆಯಲ್ಲೂ ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ನರೇಂದ್ರಮೋದಿ ಅವರು ದಕ್ಷ, ಪ್ರಾಮಾಣಿಕ ಹಾಗೂ ಅತ್ಯುತ್ತಮ ಆಡಳಿತ ನೀಡುವುದರಿಂದ ದೇಶದ ಪ್ರತಿಯೊಂದು ಜನರಿಗೂ ಅನುಕೂಲವಾಗುವಂತಹ ಯೋಜನೆಯನ್ನು ರೂಪಿಸುವ ಮೂಲಕ ಅನುಕೂಲ ಕಲ್ಪಿಸಿದ್ದಾರೆ. ಇಂತಹ ನಾಯಕತ್ವವನ್ನು ಪಡೆದಿರುವ ಭಾರತ ದೇಶದ ಜನರು ಪುಣ್ಯವಂತರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಸತೀಶ್, ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ, ಮುಖಂಡರಾದ ಮ.ನ.ಪ್ರಸನ್ನಕುಮಾರ್, ಸತೀಶ್, ವಿಜಯ್, ಉಮೇಶ್, ರಾಮೇಗೌಡ, ರವಿಕುಮಾರ್, ಯೋಗಾನಂದ, ಸುರೇಶ್, ಪ್ರಕಾಶ್, ಸುಧಾಕರ್, ರಶ್ಮಿ, ತ್ರಿವೇಣಿ, ಮಮತಾ ಇದ್ದರು.