

ಬೆಂಗಳೂರು ಬೆಂಗಳೂರು ಉತ್ತರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ನಿರೀಕ್ಷೆಯಂತೆ ಭರ್ಜರಿ ಜಯ ಸಾಧಿಸಿದ್ದಾರೆ. ಈ ಮೂಲಕ ಕಳೆದ 20 ವರ್ಷದಲ್ಲಿ ಸತತ 5ನೇ ಬಾರಿ ಬಿಜೆಪಿ ಗೆಲುವು ಸಾಧಿಸಿದೆ.
ಒಟ್ಟು 9,86,049 ಮತಗಳನ್ನು ಪಡೆಯುವ ಮೂಲಕ ಸಮೀಪದ ಅಭ್ಯರ್ಥಿ ಕಾಂಗ್ರೆಸ್‌ನ ಪ್ರೊ. ಎಂ.ವಿ. ರಾಜೀವ್‌ಗೌಡ ಅವರಿಂದ 2,59,476 ಮತಗಳ ಅಂತರದಲ್ಲಿ ಮತ ಗಳಿಕೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ರಾಜೀವ್‌ಗೌಡ ಅವರು 7,26,573 ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡಿದ್ದಾರೆ.
ನಗಗರದ ಸೇಂಟ್ ಜೋಸ್ೆ ಮತ ಎಣಿಕೆ ಕೇಂದ್ರದಲ್ಲಿ ಮಂಗಳವಾರ ನಡೆದ ಮತ ಎಣಿಕೆಯಲ್ಲಿ ಒಟ್ಟು 34 ಸುತ್ತಿನ ಮತ ಎಣಿಕೆ ನಡೆಯಿತು. ಅದರಲ್ಲಿ ಆರಂಭದಿಂದಲೂ ಶೋಭಾ ಕರಂದ್ಲಾಜೆ ಮುನ್ನಡೆ ಸಾಧಿಸುತ್ತಲೇ ಬರುತ್ತಿದ್ದರು. ಅಂತಿಮವಾಗಿ ಗೆಲುವು ಕೂಡ ತಮ್ಮದಾಗಿಸಿಕೊಂಡಿದ್ದಾರೆ.
ಕಳೆದ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಕೇಂದ್ರ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ಕೊನೇ ಕ್ಷಣದಲ್ಲಿ ಕ್ಷೇತ್ರದಲ್ಲಿ ವಿರೋಧ ವ್ಯಕ್ತವಾಗಿದ್ದ ಕಾರಣ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ವಲಸೆ ಬಂದಿದ್ದರು. ಇಲ್ಲಿ ಯಾವ ರೀತಿಯಲ್ಲಿ ಮತದಾರುರು ಸ್ವೀಕರಿಸಲಿದ್ದಾರೆ ಎಂಬ ಆತಂಕವಿದ್ದರೂ ಅಂತಿಮವಾಗಿ ಜಯದ ದಡ ತಲುಪಿಸಿದ್ದಾರೆ.