ಮಾಜಿ ಜಿಲ್ಲಾಧ್ಯಕ್ಷ ಸೇರಿ 19 ಜನರ ಮೇಲೆ ಕ್ರಮ ವಹಿಸಿದ ಬಿಜೆಪಿ

BJP
Published on

ಕಾರವಾರ:ಕೆಲ ಶಾಸಕರು ಪಕ್ಷ ಬಿಡುವ ಬೆದರಿಕೆ ಹಾಕಿದ ನಂತರ ಬಿಜೆಪಿ ರಾಜ್ಯ ನಾಯಕರು ಎಚ್ಚೆತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಽಕೃತ ಅಭ್ಯರ್ಥಿಗಳ ವಿರುದ್ಧ ಕಾರ್ಯನಿರ್ವಹಿಸಿದ ಆರೋಪದ ಮೇಲೆ ಜಿಲ್ಲೆಯ ಹಲವರ ಮೇಲೆ ಕ್ರಮ ವಹಿಸಲಾಗಿದೆ.
ಉತ್ತರ ಕನ್ನಡದ 3 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲ 17 ಪದಾಧಿಕಾರಿಗಳನ್ನು ಅವರ ಹುದ್ದೆಗಳಿಂದ ಮುಕ್ತಗೊಳಿಸಲಾಗಿದೆ. ಇಬ್ಬರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ಬಗ್ಗೆ ಅಭ್ಯರ್ಥಿಗಳು ಚುನಾವಣೆ ನಡೆದ ತಿಂಗಳೊಳಗೇ ದೂರು ನೀಡಿದ್ದರು. ಆದರೆ, ತಮ್ಮ ವಿರುದ್ಧ ಕೆಲಸ ಮಾಡಿದವರ ಮೇಲೆ ಪಕ್ಷದ ಹೈಕಮಾಂಡ್‌ ಕ್ರಮ ವಹಿಸದ ಬಗ್ಗೆ ಬಗ್ಗೆ ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಅಸಮಾಧಾನ ಹೊರ ಹಾಕಿದ್ದರು.

ಅವರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರುವ ಗುಸುಗುಸು ಕೂಡ ಕೇಳಿ ಬಂದಿತ್ತು. ರಾಜ್ಯದ ಇತರ ಕೆಲವೆಡೆಯೂ ಇದೇ ಅಸಮಾಧಾನದ ಹೊಗೆ ಆಡಿದ್ದರಿಂದ ಭಾನುವಾರ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ, ಕೆಲವು ನಿರ್ಣಯಗಳನ್ನು ಕೈಗೊಂಡಿದೆ. ಅದರ ಮರುದಿನವೇ ಜಿಲ್ಲೆಯಲ್ಲಿ ಕ್ರಮವಾಗಿದ್ದು, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅವರು ಕ್ರಮಕ್ಕೆ ಒಳಗಾದವರ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಯರ‍್ಯಾರ ಮೇಲೆ ಕ್ರಮ:
ಮುಂಡಗೋಡ ಪಟ್ಟಣ ಪಂಚಾಯಿತಿ ಸದಸ್ಯ ಫಣಿರಾಜ ಎಂ. ಹದಳಗಿ, ಪಕ್ಷದ ಜಿಲ್ಲಾ ಸಮಿತಿ ಸದಸ್ಯೆ ಸಾಧನಾ ನಾಯ್ಕ ಕರ್ಕಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಶಿರಸಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ಹಾಲಿ ಜಿಲ್ಲಾ ಕಾರ್ಯದರ್ಶಿಗಳಾದ ನಾಗರಾಜ ನಾಯ್ಕ ಬೇಡ್ಕಣಿ, ಕೃಷ್ಣಮೂರ್ತಿ ಮಡಿವಾಳ ಕಡಕೇರಿ, ಸಿದ್ದಾಪುರ ಮಂಡಳ ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಮೇಸ್ತ, ಕಾರ್ಯದರ್ಶಿ ಶ್ರೀಧರ ನಾಯ್ಕ ಬಸವನಬೈಲ್ ಅವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ.
ಯಲ್ಲಾಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಪಾಧ್ಯಕ್ಷೆ ಕಲ್ಪನಾ ಗಜಾನನ ನಾಯ್ಕ, ಸಬಗೇರಿ ಶಕ್ತಿ ಕೇಂದ್ರದ ಪ್ರಮುಖ ಬಾಬು ಬಾಂದೇಕರ್, ತಾಲೂಕು ಮಾಧ್ಯಮ ಪ್ರಕೋಷ್ಠ ಸಂಚಾಲಕ ಕೆ.ಟಿ.ಹೆಗಡೆ, ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠ್ಠಲ ಜಾನು ಪಾಂಡ್ರಮೀಶೆ, ಜಿಲ್ಲಾ ವಿಶೇಷ ಆಮಂತ್ರಿತ ಗಣಪತಿ ಗಾಂವಕರ್ ಮಾನಿಗದ್ದೆ ಅವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ.

ಭಟ್ಕಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರವಿ ನಾಯ್ಕ, ಜಿಲ್ಲಾ ಕಾನೂನು ಪ್ರಕೋಷ್ಠದ ಸಂಚಾಲಕ ಸುರೇಶ ತಿಮ್ಮಪ್ಪ ನಾಯ್ಕ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಷ್ಣುಮೂರ್ತಿ ಹೆಗಡೆ, ಜಿಲ್ಲಾ ಕಾರ್ಮಿಕ ಪ್ರಕೋಷ್ಠಾದ ಸಂಚಾಲಕ ಮುಕುಂದ ಮಂಜುನಾಥ ನಾಯ್ಕ, ಹಿಂದುಳಿದ ವರ್ಗಗಳ ಮೋರ್ಚಾದ ಈಶ್ವರ ನಾರಾಯಣ ನಾಯ್ಕ ಹಾಗೂ ಜಿಲ್ಲಾ ಪ್ರಕೋಷ್ಠ ಸಂಚಾಲಕ ಸುರೇಶ ಖಾರ್ವಿ ಮಂಕಿ ಅವರನ್ನು ಜವಾಬ್ದಾರಿಯಿಂದ ವಿಮುಕ್ತಗೊಳಿಸಲಾಗಿದೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net