

ಹೊಸಪೇಟೆ: ಕಾಂಗ್ರೆಸ್‌ನಲ್ಲಿರುವ ಉಸಿರುಗಟ್ಟುವ ವಾತಾವರಣ ಮತ್ತು ಅಗೌರವದಿಂದ ನೊಂದು ಅನೇಕರು ಇಂದು ಬಿಜೆಪಿ ಸೇರ್ಪಡೆಗೆ ಒಲವು ತೋರುತ್ತಿದ್ದಾರೆ. ಅದರಲ್ಲೂ ಅಲ್ಪಸಂಖ್ಯಾತ ನಾಯಕರ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ತಂದಿದೆ ಎಂದು ಸಚಿವ ಆನಂದ ಸಿಂಗ್ ಹೇಳಿದರು.
ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಸೈಯದ್ ಬುಡೇನ್, 13ನೇ ವಾರ್ಡ್‌ನ ಕಾಂಗ್ರೆಸ್ ಮುಖಂಡ ನಬಿ ಸಾಬ್ ಮತ್ತು ಸಾಮಾಜಿಕ ಕಾರ್ಯಕರ್ತೆ ನೂರಿ ಅವರನ್ನು ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬರಮಾಡಿಕೊಂಡ ಬಳಿಕ ಅವರು ಮಾತನಾಡಿದರು. ಈ ಹಿಂದೆ ಅನೇಕ ವಿಚಾರಗಳಿಗೆ ಬಿಜೆಪಿ ಹಾಗೂ ನನ್ನ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದರು.
ನನ್ನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೂ ಅವರನ್ನು ಗೌರವಿಸುತ್ತಿದ್ದೆ. ಪ್ರೀತಿಯಿಂದ ಕಾಣುತ್ತಿದೆ. ಆದರೆ, ನಾನಾ ಕಾರಣಗಳಿಂದ ಬೇಸತ್ತಿರುವ ಕಾಂಗ್ರೆಸ್ ನಾಯರು, ಸೈದ್ಧಾಂತಿಕವಾಗಿ ಭಿನ್ನವಾಗಿದ್ದರೂ ಬಿಜೆಪಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಹಾಗೂ ಬೆಂಗಲಿಗರು ಇದ್ದರು.