

ತುಮಕೂರು: ಬಸನಗೌಡ ಪಾಟೀಲ್ ಯತ್ನಾಳ್ ಫ್ರೀ ಇದ್ದಾರೆ. ಏನಾದರೂ ಮಾತನಾಡಲಿ, ಅವರ ಮಾತಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಲಿಂ.ಡಾ.ಶೀ ಶಿವಕುಮಾರ ಸ್ವಾಮಿಗಳ 118 ನೇ ಜಯಂತಿ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಬಗ್ಗೆ ಗಮನಕೊಡದೆ ನಾವೆಲ್ಲಾ ಒಟ್ಟಾಗಿ ಜನ ವಿರೋಧಿ ಸರ್ಕಾರದ ವಿರುದ್ಧ ಹೋರಾಡುತ್ತೇವೆ ಎಂದು ತಿಳಿಸಿದರು.
ಮನುಷ್ಯರು ಉಸಿರಾಡುವ ಗಾಳಿ ಬಿಟ್ಟು ಸಿದ್ದರಾಮಯ್ಯ ಸರ್ಕಾರ ಎಲ್ಲದಕ್ಕೂ ತೆರಿಗೆ ಹಾಕುತ್ತಿದ್ದು ಈ ಸರ್ಕಾರದ ವಿರುದ್ಧ ಬಿಜೆಪಿ ಎರಡು ಪ್ರಮುಖ ಹೋರಾಟ ಹಮ್ಮಿಕೊಂಡಿದೆ. ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಪ್ರತಿಭಟನೆ ನಡೆಸಲಿದ್ದೇವೆ. ಹಾಲು , ಪೆಟ್ರೋಲ್, ನೀರು, ವಿದ್ಯುತ್ ದರ ಜಾಸ್ತಿ ಆಗಿದೆ. ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಿದ್ದಾರೆ. ಬೆಲೆ ಏರಿಕೆ ಖಂಡಿಸಿ ಅಹೋರಾತ್ರಿ ಧರಣಿ ನಡೆಸಲಿದ್ದೇವೆ. ಎರಡನೇ ಹಂತದಲ್ಲಿ ಮುಸ್ಲಿಮರಿಗೆ ಗುತ್ತಿಗೆ ಮೀಸಲು ಕೊಟ್ಟಿರುವುದನ್ನು ವಿರೋಧಿಸಿ ಹಾಗೂ ಪರಿಶಿಷ್ಟ ಜಾತಿ, ಪಂಗಡ ಹಣ ದುರುಪಯೋಗ ಮಾಡಿರುವುದರ ಬಗ್ಗೆ ಹೋರಾಟ ಮಾಡುತ್ತೇವೆ. ಏ.7 ರಂದು ಮೈಸೂರಿನ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದು ಯಾತ್ರೆ ಆರಂಭಿಸುತ್ತೇವ ಎಂದರು.
ಈ ವೇಳೆ ಶಾಸಕರಾದ ಬಿ.ಸುರೇಶ್ ಗೌಡ, ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ರಾಜ್ಯ ಕಾರ್ಯದರ್ಶಿ ವಿನಯ ಬಿದರೆ, ಕೆಆರ್ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಚ್. ನವಚೇತನ್ ಮತ್ತಿತರರಿದ್ದರು.
ಮುಂದಿನ ಸಿಎಂ ಬಿವೈವಿ
ಸಿದ್ದಗಂಗಾ ಮಠದಲ್ಲಿ ಬಿಎಸ್ವೈ ಕುಟುಂಬಕ್ಕೆ ವಿಶೇಷ ಪ್ರೀತಿ ಇದ್ದೇಇರುತ್ತೆ. ಬಿ.ವೈ.ವಿಜಯೇಂದ್ರ ಅವರು ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಮಾಡಿ ಹೊರಬರುವ ವೇಳೆ "ವಿಜಯೇಂದ್ರ' ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ಯುವ ಮೋರ್ಚಾ ಹಾಗೂ ಪಕ್ಷದ ಕಾರ್ಯಕರ್ತರು ಅತ್ಯುತ್ಸಾಹದಲ್ಲಿ ಘೋಷಣೆ ಕೂಗಿದರು. ಈ ವೇಳೆ ಬಿವೈವಿ ಪಕ್ಷದ ಕಾರ್ಯಕರ್ತರಿಗೆ ಸುಮ್ಮನಿರುವಂತೆ ಸೂಚನೆ ನೀಡಿದರು.
ಸಿದ್ದಗಂಗಾ ಶ್ರೀಗಳ ಜನ್ಮದಿನವನ್ನು ಇಡೀ ನಾಡಿನಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಭಕ್ತರ ಪಾಲಿಗೆ ನಡೆದಾಡುವ ದೇವರು ಎನಿಸಿಕೊಂಡಿದ್ದ ಪರಮಪೂಜ್ಯ ಶಿವಕುಮಾರ ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲಾ ನಡೆಯಬೇಕಿದೆ. ತ್ರಿವಿಧ ದಾಸೋಹದ ಮೂಲಕ ಶ್ರೀಮಠದಲ್ಲಿ ಲಾಂತರ ಬಡಮಕ್ಕಳ ಬದುಕು ರೂಪಿಸಿದ್ದಾರೆ ಶ್ರೀಗಳು.
ಬಿ.ವೈ.ವಿಜಯೇಂದ್ರ,
ಬಿಜೆಪಿ ರಾಜ್ಯಾಧ್ಯಕ್ಷ