

ಮಹದೇವಪುರ : ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ಸಂಬಂಧ ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಕೂಡಲೇ ಅಂಗೀಕರಿಸಬೇಕು ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಹೂಡಿ ಹೆಚ್.ವಿ.ಮಂಜುನಾಥ್ ಎಚ್ಚರಿಸಿದ್ದಾರೆ.
ಹೂಡಿಯ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 35 ವರ್ಷಗಳ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಆಯೋಗ ನ್ಯಾಯಸಮ್ಮತವಾಗಿ ಸಮೀಕ್ಷೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ. ಆದರೆ ವರದಿ ಸ್ವೀಕರಿಸಿರುವ ಮುಖ್ಯಮಂತ್ರಿಗಳು ವರದಿಯನ್ನು ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಈಗಾಗಲೇ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಈಗ ಮುಂದಿನ 16ನೇ ತಾರೀಖಿನಂದು ವಿಶೇಷ ಸಂಪುಟ ಸಭೆ ಕರೆಯಲಾಗಿದೆ. ಅಲ್ಲಿ ವರದಿ ಬಗ್ಗೆ ಚರ್ಚಿಸಿ ಜಾರಿಗೊಳಿಸುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿಗಳು ಹಿಂದೆ ವರದಿ ಬಂದ ತಕ್ಷಣ ಜಾರಿ ಮಾಡುತ್ತೇನೆ ಎಂದು ಹೇಳಿ ಈಗ ವರಸೆ ಬದಲಿಸಿದ್ದಾರೆ. ಹರಿಯಾಣ ಪಂಜಾಬ್, ತೆಲಂಗಾಣ, ಆಂದ್ರಪ್ರದೇಶ ರಾಜ್ಯಗಳಲ್ಲಿ ವರದಿ ಜಾರಿಯಾಗಿದೆ. ನಮ್ಮ ರಾಜ್ಯದಲ್ಲಿ ಮಾತ್ರ ವರದಿ ಜಾರಿಗೊಳಿಸಲು ಹಿಂಜರಿಯುತ್ತಿದ್ದಾರೆ ಎಂದು ದೂರಿದರು.
ನ್ಯಾ. ಸದಾಶಿವ ಆಯೋಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ರಚಿಸಿದ ಮಾಧವಸ್ವಾಮಿ ಆಯೋಗದಲ್ಲಿ ಶೇ 6 ರಷ್ಟು ಮೀಸಲಾತಿ ನೀಡಲಾಗಿತ್ತು. ಈಗ ಜನಸಂಖ್ಯೆ ಪ್ರಮಾಣ ಹೆಚ್ಚಾಗಿರುವುದರಿಂದ ಶೇ 8 ರಷ್ಟು ಮೀಸಲಾತಿ ನೀಡಬೇಕು. ಸರ್ಕಾರ ಕೂಡಲೇ ವರದಿ ಜಾರಿ ಮಾಡದಿದ್ದರೆ ರಾಜ್ಯವ್ಯಾಪಿ ಹೋರಾಟ ಮಾಡುವುದಾಗಿ ಹೂಡಿ ಮಂಜುನಾಥ್ ಇದೇ ವೇಳೆ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ವಕೀಲರಾದ ವಿಕ್ರಮ್, ಕೃಷ್ಣಮೂರ್ತಿ, ಕನ್ನೆಲಿ ಕೆ.ಎಂ.ಸುರೇಶ್, ರಾಜಶೇಖರ್, ಸಂಜಯ್ ಮತ್ತಿತರರಿದ್ದರು.