

ಶ್ರೀಶೈಲ: ಮೋಕ್ಷದ ಮಹಾದ್ವಾರವಾದ ಲಿಂಗದೀಕ್ಷೆಯನ್ನು ಪಡೆಯಲು ಜಾತಿ, ವರ್ಣ, ವರ್ಗ ಮತ್ತು ಲಿಂಗ ಇತ್ಯಾದಿ ಯಾವುದೇ ಭೇದವಿಲ್ಲದೆ ಸರ್ವರಿಗೂ ಮುಕ್ತವಾದ ಅವಕಾಶವಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಶ್ರೀಶೈಲದ ಜಗದ್ಗುರು ಪಂಡಿತಾರಾಧ್ಯ ಸೂರ್ಯಸಿಂಹಾಸನ ಮಹಾಪೀಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಗುರುವಾರ ನಡೆದ ಸಾಮೂಹಿಕ ಅಯ್ಯಚಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬುದಾಗಿ ನಾಲ್ಕು ವರ್ಣಗಳಿವೆ. ಬ್ರಹ್ಮಚರ್ಯ ಗೃಹಸ್ಥ ವಾನಪ್ರಸ್ಥ ಮತ್ತು ಸನ್ಯಾಸ ಎಂಬುದಾಗಿ ನಾಲ್ಕು ಆಶ್ರಮಗಳುಂಟು. ಸ್ತ್ರೀ ಪುರುಷ ಮತ್ತು ನಪುಂಸಕ ಎಂಬ ಮೂರು ಲಿಂಗಗಳಿವೆ. ಇವುಗಳಲ್ಲಿ ಯಾವುದೇ ಜಾತಿ ವರ್ಗ ವರ್ಣದವರಿದ್ದರೂ ಶಿವನಲ್ಲಿ, ಶಿವಧರ್ಮದ ಆಚರಣೆಯಲ್ಲಿ ಶ್ರದ್ಧೆಯುಳ್ಳವನಾಗಿ, ದೀಕ್ಷಿತ ನಿಯಮಗಳನ್ನು ಪರಿಪಾಲನೆ ಮಾಡಲು ಸಿದ್ಧನಿದ್ದರೆ, ಗುರುವಿನಿಂದ ದೀಕ್ಷೆಯನ್ನು ಪಡೆದು ಲಿಂಗಧಾರಣೆ ಮಾಡಿಕೊಳ್ಳಲು ಯಾವ ಅಭ್ಯಂತರವೂ ಇಲ್ಲ. ಲಿಂಗವು ಯಾವುದೇ ಒಂದು ಜಾತಿ ಅಥವಾ ಸಮುದಾಯದ ಕುರುಹಾಗಿರದೇ ಶಿವಜ್ಞಾನದ ಮತ್ತು ಶಿವಧರ್ಮದ ಆಚರಣೆಗಳ ಸಂಕೇತವಾಗಿದೆ. ಇಷ್ಟಲಿಂಗವನ್ನು ದೇಹದ ಮೇಲೆ ಧರಿಸಿ ಪ್ರತಿನಿತ್ಯ ತಪ್ಪದೆ ಪೂಜಿಸುವವರೆಲ್ಲರೂ ವೀರಶೈವ ಲಿಂಗಾಯತರು. ಲಿಂಗದಾರಿಗಳಾದವರೆಲ್ಲರೂ ಒಂದೇ ತೆರನಾದ ಧಾರ್ಮಿಕ ಆಚರಣೆ ಹೊಂದಿದವರಾಗಿರುವುದರಿಂದ ಅವರಲ್ಲಿ ಯಾವುದೇ ರೀತಿಯ ಭೇದಭಾವವನ್ನು ಮಾಡಬಾರದು. ಪಂಚಪೀಠಗಳು ಸನಾತನ ಕಾಲದಿಂದಲೂ ಯಾವುದೇ ತಾರತಮ್ಯವಿಲ್ಲದೇ ಸರ್ವ ಜನರಿಗೂ ಧರ್ಮದ ಸಂಸ್ಕಾರಗಳನ್ನು ನೀಡುವುದರ ಜೊತೆಗೆ ನೈತಿಕ ಮಾರ್ಗದರ್ಶನವನ್ನು ಮಾಡಿವೆ ಎಂದು ಜಗದ್ಗುರುಗಳು ವಿವರಿಸಿದರು.
ಜೈನಾಪುರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳು ದೀಕ್ಷಾರ್ಥಿಗಳಿಗೆ ಮತ್ತು ವಟುಗಳಿಗೆ ಲಿಂಗದೀಕ್ಷೆ ಮತ್ತು ಅಯ್ಯಚಾರಗಳನ್ನು ನೀಡಿದರು. 100 ಕ್ಕೂ ಅಧಿಕ ಜಂಗಮ ವಟುಗಳು ಅಯ್ಯಚಾರವನ್ನು ಮತ್ತು ಅನೇಕ ಭಕ್ತರು ಲಿಂಗದೀಕ್ಷೆವನ್ನು ಪಡೆದುಕೊಂಡರು. ಮಲ್ಲಿಕಾರ್ಜುನ ಶಾಸ್ತ್ರಿಗಳು ಮತ್ತು ನಾಗಾಜ ಶಾಸ್ತ್ರಿಗಳು ದೀಕ್ಷೆಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪೀಠದ ವ್ಯವಸ್ಥಾಪಕರಾದ ಮಂಜುನಾಥ ಸ್ವಾಮಿ, ಜಂಗಮ ಸಮಾಜದ ನಟರಾಜ್, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಭಕ್ತರು ಪಾಲ್ಗೊಂಡಿದ್ದರು.