

ತುಮಕೂರು: ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರು ಸಹಕಾರ ಸಚಿವ ಕೆ.ಎನ್.ರಾಜಣ್ಣರ ಕೈಗೊಂಬೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು ಮೂದಲಿಸಿದರು.
ದಲಿತರು, ಒಕ್ಕಲಿಗರ ಮೇಲೆ ರಾಜಣ್ಣಗೆ ಎಷ್ಟು ದ್ವೇಷವಿದೆ ಎಂಬುದನ್ನು ಅವರ ನಡವಳಿಕೆಯಿಂದಲೇ ತಿಳಿಯಬಹುದು. 2013ರಲ್ಲಿ ಸಿದ್ದರಾಮಯ್ಯ ಜತೆ ಸೇರಿ ಡಾ.ಜಿ.ಪರಮೇಶ್ವರ ಅವರನ್ನು ಸೋಲಿಸಲು ಷಡ್ಯಂತ್ರ ರೂಪಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರನ್ನು ಸೋಲಿಸಿದರು. ಹಾಗಾಗಿ, ರಾಜಣ್ಣ ಅವರ ಬಾಲಂಗೋಚಿಯಾಗಿರುವ ಮುದ್ದಹನುಮೇಗೌಡರನ್ನು ದಲಿತರು ಸೋಲಿಸಬೇಕು ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಕರೆನೀಡಿದರು.
ಅಂಬೇಡ್ಕರ್ ಅವರನ್ನು 1952ರ ಲೋಕ ಚುನಾವಣೆಯಲ್ಲಿ ಸೋಲಿಸುವ ಮೂಲಕ ಕಾಂಗ್ರೆಸ್ ದ್ರೋಹ ಎಸಗಿದೆ. ಅಂದಿನಿಂದ ಇಂದಿನವರೆಗೂ ದಲಿತರನ್ನು ಕತ್ತಲಲ್ಲಿ ಇಟ್ಟು,ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡು ವಂಚಿಸಲಾಗುತ್ತಿದೆ. ಈ ಬಾರಿಯ ಚುನಾವಣೆ ದಲಿತರ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದ್ದು, ಅಂಬೇಡ್ಕರ್ ಅವರನ್ನು ನಿರಂತರವಾಗಿ ಅಪಮಾನಿಸುತ್ತಲೇ ಬಂದ ಕಾಂಗ್ರೆಸ್‌ಗೆ ದಲಿತರು ತಕ್ಕಪಾಠ ಕಲಿಸಬೇಕು. ಬಿಜೆಪಿಯನ್ನು ಅಂಬೇಡ್ಕರ್ ಅಭಿಮಾನಿಗಳು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಈ ದೇಶದ ಯುವಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಸ್ಟಾರ್ಟಪ್ ಆಫ್ ಇಂಡಿಯಾ, ಮುದ್ರಾ ಯೋಜನೆಗಳ ಮೂಲಕ ಸ್ವಯಂ ಉದ್ಯೋಗ ಒದಗಿಸುವ ಕೆಲಸ ಮಾಡಿದೆ. ಅಲ್ಲದೆ ಉಜ್ವಲ ಯೋಜನೆಯ ಮೂಲಕ ಅಡುಗೆ ಅನಿಲ ನೀಡಿ, ಮಹಿಳೆಯರು ಹೊಗೆ ಕುಡಿಯುವುದನ್ನು ತಪ್ಪಿಸಿದ್ದಾರೆ. ಬಡವರ ಪರವಾಗಿ ಕೆಲಸ ಮಾಡುತ್ತಿರುವ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು. ಮೋದಿ ಕೈ ಬಲಪಡಿಸಲು ತುಮಕೂರಿನಲ್ಲಿ ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣರನ್ನು ಆಶೀರ್ವದಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವೆಂಕಟರಾಮು, ಆಂಜನಪ್ಪ, ಅಂಜನಮೂರ್ತಿ, ಲೋಕೇಶ್, ಇಂದ್ರಕುಮಾರ್, ಡಿ.ಕೆ,ಶಬ್ಬೀರ್ ಅಹಮದ್, ಪ್ರತಾಪ್, ನವೀನ್, ಜಯಪುರ ಮಂಜುನಾಥ್, ಎಸ್.ರಾಮಚಂದ್ರರಾವ್, ದಿಬ್ಬೂರು ನಾಗರಾಜು, ಸುಶೀಲ್ ಕುಮಾರ್, ಗಿರೀಶ್ ಮತ್ತಿತರರು ಹಾಜರಿದ್ದರು.