ಸಹಕಾರಿ ಸಂಘ ನಿರ್ದೇಶಕಿ ವಜಾ ಖಂಡಿಸಿ ಬಿಜೆಪಿ ಪ್ರತಿಭಟನೆ

gan (17)
Published on

ಕುಂದಾಪುರ: ಬ್ರಹ್ಮಾವರ ತಾಲೂಕಿನ ಕೋಟ ಸಹಕಾರಿ ವ್ಯವಸಾಯ ಸಂಘದ ನಿರ್ದೇಶಕಿ ಉಮಾ ಗಾಣಿಗ ಅವರನ್ನು ಸಹಕಾರಿ ಕಾಯ್ದೆಗೆ ವಿರುದ್ಧವಾಗಿ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿದ ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕ್ರಮ ಖಂಡಿಸಿ ಬಿಜೆಪಿ ಕುಂದಾಪುರ ಮಂಡಲದ ವತಿಯಿಂದ ಬಿಜೆಪಿ ಕಾರ್ಯಕರ್ತರು, ಕೋಟ ಸಹಕಾರಿ ವ್ಯವಸಾಯ ಸಂಘದ ನಿರ್ದೇಶಕರು, ಸಹಕಾರಿಗಳು ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.

ಕೋಟ ಸಹಕಾರಿ ವ್ಯವಸಾಯ ಸಂಘದ ನಿರ್ದೇಶಕರಾದ ಸುರೇಶ ಕುಂದರ್, ರಂಜಿತ್ ಮತ್ತು ಅಜಿತ್ ಮಾತನಾಡಿ, ಕೋಟ ಸಹಕಾರಿ ವ್ಯವಸಾಯ ಸಂಘದ ಆಡಳಿತ ಮಂಡಳಿ ಚುನಾವಣೆ 2025ರ ಜನವರಿ 19ರಂದು ನಡೆದಿದ್ದು ಆ ಚುನಾವಣೆಯಲ್ಲಿ ಮಹಿಳಾ ಕ್ಷೇತ್ರದಿಂದ ಉಮಾ ಗಾಣಿಗ ಚುನಾಯಿತ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದರು. ಉಮಾ ಗಾಣಿಗ ಎದುರು ಸ್ಪರ್ಧಿಸಿ ಸೋತ ಅಭ್ಯರ್ಥಿ ಪ್ರೇಮಾ ಅವರು ಮರುಎಣಿಕೆ ಮಾಡಬೇಕೆಂದು ಕುಂದಾಪುರ ಎ.ಆರ್.ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಮರುಎಣಿಕೆಗೆ ಕೋರ್ಟ್ ಆದೇಶಿಸಿತ್ತು. ಆದರೆ ಮರುಎಣಿಕೆ ನಡೆಯುವ ಮೊದಲೇ ಉಮಾ ಗಾಣಿಗ ಅವರನ್ನು ಸಹಕಾರಿ ಕಾಯ್ದೆಗೆ ವಿರುದ್ಧವಾಗಿ ನಿರ್ದೇಶಕ ಸ್ಥಾನದಿಂದ ವಜಾ ಮಾಡಿರುವುದು ಎಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿಯ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿಕುದ್ರು, ಗೀತಾಂಜಲಿ ಸುವರ್ಣ, ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ ಶೆಟ್ಟಿ ಗೋಪಾಡಿ, ಮಾಜಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ ಪೂಜಾರಿ, ಸುಧೀರ ಕೆ.ಎಸ್., ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ಮಾಜಿ ಅಧ್ಯಕ್ಷ ದೀಪಕುಮಾರ್ ಶೆಟ್ಟಿ, ರಾಜೇಶ ಕಾವೇರಿ, ವಿಠಲ ಪೂಜಾರಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ, ಯುವಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಉಮೇಶ ಶೆಟ್ಟಿ ಕಲ್ಗದ್ದೆ, ಉಮಾ ಗಾಣಿಗ, ಕೋಟ ಸಹಕಾರಿ ವ್ಯವಸಾಯ ಸಂಘದ ನಿರ್ದೇಶಕರು, ಕುಂದಾಪುರ ಪುರಸಭೆ ಸದಸ್ಯರು, ವಿವಿಧ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಪಕ್ಷದ ಮುಖಂಡರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net