ಡಿಸಿಎಂ ಡಿಕೆಶಿ ವಿರುದ್ಧ ಬಿಜೆಪಿ ಪ್ರತಿಭಟನೆ

25-KGLPHOTO-6,,,
Published on

ಕೊಳ್ಳೇಗಾಲ: ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಪಟ್ಟಣದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ವೃತ್ತದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಭಾವಚಿತ್ರವನ್ನು ಸುಟ್ಟು ಅಕ್ರೋಶ ಹೊರ ಹಾಕಿದ ಪ್ರತಿಭಟನಾಕಾರರು ಈ ಕೊಡಲೇ ಡಿಕೆಶಿ ಅವರು ಕೆಪಿಸಿಸಿ ಅಧ್ಯಕ್ಷರು ಹಾಗೂ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಬಿಜೆಪಿ ರಾಜ್ಯ ಉಪಾದ್ಯಕ್ಷ ಎನ್.ಮಹೇಶ್ ಮಾತನಾಡಿ, ಭಾರತದ ಸಂವಿಧಾನದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಲು ಅವಕಾಶವಿದೆ. ಧರ್ಮ ಆಧಾರಿತವಾಗಿ ಮೀಸಲಾತಿಯನ್ನು ಕೊಡಲು ಅವಕಾಶವಿಲ್ಲ. ಆದರೆ, ಯಾವುದೇ ಧರ್ಮದಲ್ಲಿರುವ ಹಿಂದುಳಿದಿರುವ ಜಾತಿಗಳಿಗೆ ಮೀಸಲಾತಿ ನೀಡಲು ಅವಕಾಶವಿದೆ.

ಈ ಆಧಾರದ ಮೇಲೆ ಪ್ರವರ್ಗ 1 ರಲ್ಲಿ ಮುಸ್ಲಿಂ ಸಮುದಾಯದಲ್ಲಿರುವ ಹಿಂದುಳಿದ 19 ಜಾತಿಗಳಿಗೆ ಮೀಸಲಾತಿ ನೀಡಿದೆ. ಧರ್ಮದ ಆಧಾರ ಮೇಲೆ ಮೀಸಲಾತಿ ನೀಡ ಬಾರದೆಂಬುದು ಡಾ.ಬಿ.ಆರ್.ಅಂಬೇಡ್ಕರ್ ಅವರ ವಾದವಾಗಿದೆ. ಭಾರತ ಹಾಗೂ ಪಾಕಿಸ್ತಾನ ವಿಭಜನೆಯಾದಾಗ ಈ ವಿಚಾರ ಚರ್ಚೆಗೆ ಬಂದಿತ್ತು. ಭಾರತದಲ್ಲಿ ಉಳಿದು ಕೊಂಡಿರುವ ಮುಸ್ಲಿಂ ಸಮುದಾಯದಲ್ಲಿ ಹಿಂದುಳಿದವರಿಗೆ ಅವರಿಗೆ ಮೀಸಲಾತಿ ನೀಡಬೇಕೆಂದು ಅಂಬೇಡ್ಕರ್ ಹೇಳಿಸಿದ್ದಾರೆ. ಅದನ್ನೆ ಸಂವಿಧಾನದಲ್ಲಿ ಸೇರಿಸಿದ್ದಾರೆ.

ವೋಟಿಗಾಗಿ ಕಾಂಗ್ರೆಸ್ ಮುಸ್ಲಿಂಮರ ಮೂಗಿಗೆ ತುಪ್ಪಸವರಲು ಹೊರಟಿದೆ. ಆದರೀಗ ದೆಹಲಿಯಲ್ಲಿ ಮಾಧ್ಯಮ ದವರು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಅವಕಾಶವಿಲ್ಲ ನೀವು ಹೇಗೆ ಕೊಡುತ್ತೀರಿ ಎಂಬ ಪ್ರಶ್ನೆಗೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಹೌದು ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಅವಕಾಶವಿಲ್ಲ. ನಾವು ಕೊಟ್ಟಿದ್ದೇವೆ ಈ ಬಗ್ಗೆ ಯಾರಾದರೂ ಕೋರ್ಟ್‌ಗೆ ಹೋಗುತ್ತಾರೆ. ಕೋರ್ಟ್ ಏನು ತೀರ್ಮಾನ ನೀಡುತ್ತದೆ ನೋಡೋಣ, ಕಾಯ್ದು ನೋಡುತ್ತೇವೆ ಸಂವಿಧಾನವನ್ನು ಬದಲಾಯಿಸಿ ಮೀಸಲಾತಿ ಕೊಡುತ್ತೇವೆ ಎಂದಿದ್ದಾರೆ. ಡಿಕೆಶಿ ಅವರಿಗೆ ಸಂವಿಧಾನ ಪಾಠವನ್ನು ಸ್ಪೀಕರ್ ಅವರು ಮಾಡಬೇಕು. ಕೂಡಲೇ ಡಿ.ಕೆ. ಶಿವಕುಮಾರ್ ಕ್ಷಮೆಯಾಚಿಸಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಸ್.ಬಾಲರಾಜು, ಬಿಜೆಪಿ ಯುವ ಮುಖಂಡ ನಿಶಾಂತ್, ಬಿಜೆಪಿ ಎಸ್ಸಿ ಮೊರ್ಚಾ ಅಧ್ಯಕ್ಷ ಸಿದ್ದಪ್ಪಾಜಿ, ನಗರಸಭೆ ಮಾಜಿ ಸದಸ್ಯ ಕೆ.ಕೆ. ಮೂರ್ತಿ, ಮಧುಚಂದ್ರ, ನಟರಾಜು, ಚಂದು, ಮುಖಂಡರಾದ ಬೂದಿತಿಟ್ಟು ರಾಜೇಂದ್ರ, ಆಗಸ್ಟೀನ್, ಪ್ರಭು ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net