ಪರಂ ನಿವಾಸಕ್ಕೆ ಬಿಜೆಪಿ ಮುತ್ತಿಗೆ ಪ್ರಹಸನ

Suresh_Gowda
Published on

ತುಮಕೂರು: ಹಸುವಿನ ಕೆಚ್ಚಲು ಕೊಯ್ದು ಹಿಂಸೆ ಮಾಡಿದ ಪ್ರಕರಣದ ಆರೋಪಿಗಳನ್ನು ಪತ್ತೆಮಾಡಿ ಕಠಿಣಕ್ರಮ ಕೈಗೊಳ್ಳದೇ ರ್ನಿಲಕ್ಷ$್ಯವಹಿಸಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹಸಚಿವ ಡಾ.ಜಿ.ಪರಮೇಶ್ವರ್​ ನಿವಾಸಕ್ಕೆ ಮುತ್ತಿಗೆ ಹಾಕುವ "ಹೈಡ್ರಾಮಾ'ವೇ ನಡೆಯಿತು.

ಗೃಹಸಚಿವರ ನಿವಾಸಕ್ಕೆ ಮುತ್ತಿಗೆ ಹಾಕುವ ಬಿಜೆಪಿ ಹೋರಾಟದ ಹಿನ್ನೆಲೆಯಲ್ಲಿ ಗೊಲ್ಲಹಳ್ಳಿಯ ಸಿದ್ಧಾರ್ಥನಗರದ ಪರಂ ನಿವಾಸಕ್ಕೆ ಪೊಲೀಸ್​ ಸರ್ಪಗಾವಲು ಹಾಕಲಾಗಿತ್ತು. ಈ ಪೊಲೀಸ್​ ಕೋಟೆ ಭೇದಿಸಲು ಹೋರಾಟದ ದಿಕ್ಕನ್ನೇ ಬದಲಿಸಿದ ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ತಲೆಗೆ ಕೇಸರಿ ಶಾಲು ಸುತ್ತಿಕೊಂಡು ಪೊಲೀಸರ ಕಣ್ತಪ್ಪಿಸಿ ನಗರ ಸಾರಿಗೆ ಬಸ್​ ಏರಿ ಸಿದ್ದಾರ್ಥನಗರ ಬಂದಿಳಿದು ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳನ್ನು ಬಂಧಿಸದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಚಿವರ ನಿವಾಸದತ್ತ ನುಗ್ಗಲು ಯತ್ನಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​, ಎಂ.ಪಿ.ರಾಜಶೇಖರ್​, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಜೀಪ್​ಗಳಲ್ಲಿ ತುಂಬಿಕೊಂಡು ಎಳೆದೊಯ್ಯದರು.

ಸಗಣಿ ಮೆತ್ತುವ ಯತ್ನ!: ಪರಮೇಶ್ವರ್​ ನಿವಾಸದ ಬಳಿ ಪೊಲೀಸ್​ ಭದ್ರಕೋಟೆ ಇರುವುದನ್ನು ಮನಗಂಡಿದ್ದ ಸುರೇಶಗೌಡ ಹಾಗೂ ಬಿಜೆಪಿ ಪದಾಧಿಕಾರಿಗಳು ಸಾರಿಗೆ ಬಸ್​ನಲ್ಲಿ ಬಂದಿಳಿದು ಏಕಾಏಕಿ ಸಚಿವರ ನಿವಾಸಕ್ಕೆ ನುಗ್ಗುವ ಯತ್ನ ನಡೆಸಿದ್ದರು. ಮುತ್ತಿಗೆ ಹಾಕುವ ಸಂದರ್ಭದಲ್ಲಿ ಸುರೇಶಗೌಡ ಕೈಗೆ ಸಗಣಿ ಮೆತ್ತಿಕೊಂಡು ಬಂದಿದ್ದಲ್ಲದೆ ಪರಂ ಮನೆಗೆ ಬಳಿಯಲು ಮುಂದಾಗಿದ್ದರು. ಈ ಹೋರಾಟವನ್ನರಿಯದ ಪೊಲೀಸರು ಕೆಲಕ್ಷಣ ಗಲಿಬಿಲಿಗೊಂಡರು. ಕೆಲಕ್ಷಣದಲ್ಲೇ ದೊಡ್ಡ ಪ್ರಹಸನ ನಡೆದುಹೋಯಿತು.

ಸಚಿವರ ನಿವಾಸದ ಬಳಿ ಬೀಡುಬಿಟ್ಟಿದ್ದ 200ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು, ಮುತ್ತಿಗೆ ಹಾಕಲು ಬಂದ ಮುಖಂಡರನ್ನು ಪ್ರತ್ಯೇಕವಾಗಿ ವಶಕ್ಕೆ ಪಡೆದ ಪೊಲೀಸರು ಬಲವಂತವಾಗಿ ನಗರದ ಚಿಲುಮೆ ಸಮುದಾಯ ಭವನಕ್ಕೆ ಕರೆದೊಯ್ಯದರು.

ಪ್ರತಿಭಟನೆ ಹತ್ತಿಕ್ಕಿದ ಪೊಲೀಸರ ಕ್ರಮವನ್ನು ಖಂಡಿಸಿದ ಶಾಸಕ ಬಿ.ಸುರೇಶ್​ಗೌಡ, ದೇಶದಲ್ಲಿ ಗೋವನ್ನು ದೇವರೆಂದು ಪೂಜಿಸುತ್ತೇವೆ. ಅದು ನಮಗೆ ಅಮೃತ ಕೊಡುತ್ತದೆ. ಕಾಂಗ್ರೆಸ್​ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಪದೇಪದೆ ಹಿಂದುಗಳ ಭಾವನೆಗೆ ಧಕ್ಕೆ ತರುವ ಕೃತ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ. ಸರ್ಕಾರವು ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿರುವುದೇ ಇಂತಹ ಘಟನೆಗಳಿಗೆ ಕಾರಣ ಎಂದು ಆಕ್ರೋಶ ಹೊರಹಾಕಿದರು.

ಕಾನೂನಿನ ಭಯವಿಲ್ಲದೆ ಅಟ್ಟಹಾಸ ಮೆರೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿರುವುದೇ ಇದಕ್ಕೆಲ್ಲಾ ಕಾರಣ. ಈ ಸರ್ಕಾರದ ಆಯುಷ್ಯ ಕಡಿಮೆ ಇದೆ, ತುಷ್ಟೀಕರಣ ರಾಜಕಾರಣದಿಂದ ಬೇಸತ್ತಿರುವ ರಾಜ್ಯದ ಜನ ಈ ಸರ್ಕಾರವನ್ನು ಕಿತ್ತೊಗೆಯುತ್ತಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದಲ್ಲಿ ಯಾರೋ ಅಮಾಯಕನನ್ನು ಹಿಡಿದುತಂದು, ಅವನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಈ ಘಟನೆ ಹಿಂದೆ ಯಾರ್ಯಾರು ಇದ್ದಾರೆ ಅನ್ನುವುದು ನಮಗೂ ಗೊತ್ತು. ಪರೋಕ್ಷವಾಗಿ ಶಾಸಕ ಜಮೀರ್​ ಅಹ್ಮದ್​ ಕೈವಾಡವಿದ್ದು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಎಂದು ಒತ್ತಾಯಿಸಿದರು.

ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ಹಸುವಿನ ಕೆಚ್ಚಲು ಕೊಯ್ದು, ಮಚ್ಚಿನಿಂದ ಹೊಡೆದ ಅಮಾನುಷವಾಗಿ ಕೃತ್ಯವನ್ನು ಗಂಭೀರವಾಗಿ ಸ್ವೀಕರಿಸಿ ಸಮಗ್ರ ತನಿಖೆ ಮಾಡಬೇಕು, ಇದರ ಹಿಂದಿರುವ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಈ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್​.ಎಸ್​.ರವಿಶಂಕರ್​, ಮುಖಂಡರಾದ ಎಸ್​.ಶಿವಪ್ರಸಾದ್​, ಎಸ್​.ಡಿ. ದಿಲೀಪ್​ಕುಮಾರ್​, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗಂಗರಾಜು, ಸಂದೀಪ್​ಗೌಡ, ಕಾರ್ಯದರ್ಶಿ ಎಚ್​.ಎಂ.ರವೀಶಯ್ಯ, ನಗರಾಧ್ಯಕ್ಷ ಟಿ.ಹೆಚ್​.ಹನುಮಂತರಾಜು, ರೈತ ಮೋರ್ಚಾ ನಗರಾಧ್ಯಕ್ಷ ಸತ್ಯಮಂಗಲ ಜಗದೀಶ್​, ಜಿಲ್ಲಾ ಒಬಿಸಿ ಅಧ್ಯಕ್ಷ ಕೆ.ವೇದಮೂರ್ತಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಿ.ಎಚ್​.ಚೇತನ್​, ಪ್ರಧಾನ ಕಾರ್ಯದರ್ಶಿ ಧನುಷ್​, ಮುಖಂಡರಾದ ಗುಬ್ಬಿ ಪಂಚಾಕ್ಷರಿ, ಗಣೇಶ್​ಪ್ರಸಾದ್​, ಬನಶಂಕರಿಬಾಬು, ತಿಪ್ಪೇಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಹೋರಾಟದಲ್ಲಿ ಭಾಗಿಯಾಗಿದ್ದರು.

ಗೋವನ್ನು ಪೂಜಿಸುವ ದೇಶದಲ್ಲಿ ಗೋ ಮಾತೆ ಮೇಲಿನ ದೌರ್ಜನ್ಯ ದೇಶವೇ ಖಂಡಿಸುವಂತದ್ದು. ಹಸುವಿನ ಕೆಚ್ಚಲು ಕೊಯ್ಯುವ ಮನ@ಸ್ಥಿತಿಯನ್ನು ಸಿದ್ದರಾಮಯ್ಯ ಸರ್ಕಾರ ಹುಟ್ಟುಹಾಕಿದೆ. ಈ ಅಮಾನುಷ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರನ್ನು ಒದ್ದು ಒಳಗೆ ಹಾಕಬೇಕು. ಬಿ.ಸುರೇಶಗೌಡ ಗ್ರಾಮಾಂತರ ಶಾಸಕ ಗೋ ಮಾತೆ ಮೇಲಿನ ದೌರ್ಜನ್ಯ ಎಲ್ಲರೂ ಖಂಡಿಸುವಂತಹ ಹೇಯಕೃತ್ಯ. ಈ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಕಾಂಗ್ರೆಸ್​ ಸಚಿವರು ಬಂದಕಡೆಯೆಲ್ಲಾ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕುತ್ತೇವೆ. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ, ತಮ್ಮ ಲೋಪ ಮುಚ್ಚಿಕೊಳ್ಳಲು ಇಂತಹ ವಿವಾದಗಳನ್ನು ಸೃಷ್ಟಿಮಾಡಿ ಜನರನ್ನು ದಿಕ್ಕುತಪ್ಪಿಸುವಲ್ಲಿ ಕಾಂಗ್ರೆಸ್ಸಿಗರು ನಿರತರಾಗಿದ್ದಾರೆ. ಎಚ್​.ಎಸ್​.ರವಿಶಂಕರ್​ ಬಿಜೆಪಿ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net