ಮೀಸಲು ಸ್ಥಗಿತ ರಾಹುಲ್​ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

BJP_protest
Published on

ತುಮಕೂರು: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್​ಗಾಂಧಿ ಮೀಸಲಾತಿ ನಿಲ್ಲಿಸುವ ವಿಚಾರವಾಗಿ ಹೇಳಿಕೆ ನೀಡಿ, ದಲಿತ ವಿರೋಧಿ ಧೋರಣೆ ತೋರಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಎಸ್​ಸಿ ಮತ್ತು ಎಸ್​ಟಿ ಮೋರ್ಚಾ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೈ.ಎಚ್​.ಹುಚ್ಚಯ್ಯ ಮಾತನಾಡಿ, ದಲಿತರ ಉದ್ಧಾರ ಮಾಡುತ್ತೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್​ನವರು ದಲಿತರ ಅಭಿವೃದ್ಧಿಗೆ ಮೀಸಲಾದ ಕೋಟ್ಯಾಂತರ ರೂ. ಹಣ ಲೂಟಿ ಮಾಡಿದ್ದಾರೆ. ಮಹರ್ಷಿ ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆಗಾಗಿ ಬಳಸಿಕೊಂಡು ಈ ಸಮುದಾಯಕ್ಕೆ ದ್ರೋಹ ಮಾಡಿದ್ದಾರೆ. ಪರಿಶಿಷ್ಟ ಜಾತಿಯ ಹಣವನ್ನು ಗ್ಯಾಂರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ದ್ರೋಹ ಮಾಡಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್​ ಸರ್ಕಾರ ದಲಿತರ ಅಭಿವೃದ್ಧಿಗಾಗಿ ಯಾವುದೇ ಸಮರ್ಪಕವಾದ ಯೋಜನೆ ಜಾರಿಗೆ ತಂದಿಲ್ಲ, ಕೇವಲ ದಲಿತರನ್ನು ಕೇವಲ ಮತ ಬ್ಯಾಂಕ್​ ರಾಜಕಾರಣಕ್ಕೆ ಬಳಸಿಕೊಂಡಿದ್ದಾರೆ. ಈಗ ದಲಿತರ ಮೀಸಲಾತಿ ಸ್ಥಗಿತಗೊಳಿಸುವ ಬಗ್ಗೆ ರಾಹುಲ್​ ಗಾಂಧಿ ಮಾತನಾಡಿದ್ದಾರೆ. ಹಾಗೆ ಮಾಡಲು ದಲಿತರು ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಸಿದರು.

ಎಸ್​ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹಂತೇಶ ನಾಯಕ ಮಾತನಾಡಿ, ರಾಹುಲ್​ಗಾಂಧಿ ಅವರು ಅಮೇರಿಕ ಪ್ರವಾಸದ ವೇಳೆ, ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುತ್ತೇವೆ, ಮೀಸಲಾತಿ ತೆಗೆದುಹಾಕಿದರೆ ಮಾತ್ರ ದೇಶ ಉದ್ಧಾರ ಹೊಂದಲು ಸಾಧ್ಯ ಎಂಬ ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ದೂರಿದರು.

ಕಾಂಗ್ರೆಸ್​ ಪಕ್ಷ ದಲಿತರನ್ನು ಮತ ಬ್ಯಾಂಕ್​ ಆಗಿ ಬಳಸಿಕೊಂಡಿತೇ ಹೊರತು, ದಲಿತರ ಏಳಿಗೆಗೆ ಕಾಳಜಿವಹಿಸಲಿಲ್ಲ, ಇಷ್ಟು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್​ ಆಡಳಿತದಲ್ಲಿ ದಲಿತ ವರ್ಗದ ಪರಿಸ್ಥಿತಿ ಸುಧಾರಣೆ ಆಗಲಿಲ್ಲ, ಮುಂದಿನ ಚುನಾವಣೆಗಳಲ್ಲಿ ದಲಿತರು ಕಾಂಗ್ರೆಸ್​ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಸಂವಿಧಾನದ ಪುಸ್ತಕ ಹಿಡಿದುಕೊಂಡು ನಾವು ಸಂವಿಧಾನ ರಕ್ಷಕರು, ಬಿಜೆಪಿಯವರು ಸಂವಿಧಾನ, ದಲಿತ ವಿರೋಧಿಗಳು ಎಂದು ಬಿಂಬಿಸುವ ಪ್ರಯತ್ನವನ್ನು ಕಾಂಗ್ರೆಸ್​ ಮುಖಂಡರು ಮಾಡುತ್ತಿದ್ದಾರೆ, ದಲಿತ ಸಮುದಾಯದವರು ಈಗ ಪ್ರಜ್ಞಾವಂತರಾಗಿದ್ದಾರೆ. ಕಾಂಗ್ರೆಸ್​ ನಾಯಕರ ಸುಳ್ಳು ಮಾತುಗಳನ್ನು ನಂಬುವುದಿಲ್ಲ ಎಂದರು.

ಎಸ್​ಸಿ ಮೋರ್ಚಾ ಜಿಲ್ಲಾಧ್ಯಕ್ಷ ಆಂಜನಪ್ಪ, ಎಸ್​ಟಿ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್​, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್​, ಮುಖಂಡರಾದ ಎಸ್​.ಶಿವಪ್ರಸಾದ್​, ಬಂಬೂ ಮೋಹನ್​, ಹನುಮಂತರಾಯಪ್ಪ, ರಾಕೇಶ್​, ಧನುಷ್​ ನಾಯಕ್​, ಸತ್ಯಮಂಗಲ ಜಗದೀಶ್​, ಬೆಳಗುಂಬ ವೆಂಕಟೇಶ್​, ಕೆ.ಎಸ್​.ಕುಮಾರ್​, ಜಿ.ಗಂಗಾಧರ್​, ವೀರಣ್ಣ, ವೆಂಕಟೇಶಾಚಾರ್​, ಸಣ್ಣರಂಗಯ್ಯ, ದಿಲೀಪ್​ ಮತ್ತಿತರರು ಇದ್ದರು.

ದಲಿತ ಮತಗಳಿಂದಲೇ ದೇಶದಲ್ಲಿ ಅತೀ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್​ ಮೀಸಲಾತಿ ವಿರುದ್ಧ ಮಾತನಾಡುತ್ತಿರುವುದು ಖಂಡನೀಯ. ದಲಿತ ಸಮುದಾಯದ ವಿರುದ್ಧ ಕಾಂಗ್ರೆಸ್​ ನಡೆದುಕೊಳ್ಳಲು ದೇಶದಲ್ಲಿರುವ ಬಹುಸಂಖ್ಯಾತ ದಲಿತ ಸಮುದಾಯ ಅವಕಾಶ ನೀಡುವುದಿಲ್ಲ. ರಾಹುಲ್​ಗಾಂಧಿ ಅಮೇರಿಕಾದಲ್ಲಿ ನೀಡಿರುವ ಹೇಳಿಕೆ ವಾಪಸ್​ ಪಡೆಯಬೇಕು. ವೈ.ಎಚ್​.ಹುಚ್ಚಯ್ಯ ಜಿಪಂ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net